ನವದೆಹಲಿ: ಎಸ್ಐಆರ್ ವಿವಾದ ಮತ್ತು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದು, ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಮೆರವಣಿಗೆ ನಡೆಸಿದೆ. ಆಕಾಶವಾಣಿ ಕಚೇರಿ ಸಮೀಪದಲ್ಲೇ ಪೊಲೀಸರು ಪ್ರತಿಭಟನೆಕಾರರನ್ನು ತಡೆದಿದ್ದಾರೆ.
ಈ ವೇಳೆ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಕಚೇರಿಯಿಂದ ಸ್ವಲ್ಪ ದೂರದಲ್ಲಿರುವ ಬ್ಯಾರಿಕೇಡ್ ಹತ್ತಿ ರಾಷ್ಟ್ರಧ್ವಜ ಬೀಸುತ್ತಾ ಪ್ರತಿಭಟನೆ ನಡೆಸಿದ್ದು, ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತು ಪ್ರತಿಭಟನೆ ಸಮಯದಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿದ ಪೊಲೀಸರು, ಸ್ವಲ್ಪ ಸಮಯದಲ್ಲೇ ಅವರನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಅವರು ಪ್ರತಿಭಟನೆಯಲ್ಲಿ ಸೇರ್ಪಡೆಯಾಗಿದ್ದಾರೆ.
'ಪ್ರಜಾಪ್ರಭುತ್ವವನ್ನು ಉಳಿಸಿ' ಅಭಿಯಾನದ ಭಾಗವಾಗಿ, ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ, ಮತಗಳ್ಳ ಜ್ಞಾನೇಶ್ ಕುಮಾರ್ ಎಂಬ ಬ್ಯಾನರ್ ಹಿಡಿದು ಇಂಡಿಯಾ ಒಕ್ಕೂಟದ ಸಂಸದರು ಸಂಸತ್ ಭವನದಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿಯಾದ ನಿರ್ವಚನ ಸದನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಇನ್ನೂ ಚುನಾವಣಾ ಆಯೋಗದ ಕಚೇರಿಗೆ ತೆರಳದಂತೆ ಆಕಾಶವಾಣಿ ಭವನ ಮತ್ತು ನೀತಿ ಆಯೋಗದ ಗೇಟ್ ಬಳಿ ಪ್ರತಿಭಟನಾಕಾರರನ್ನು ತಡೆದ ಹಿನ್ನೆಲೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಕಾಶವಾಣಿ ಕಚೇರಿ ಆವರಣದಲ್ಲೇ ಧರಣಿ ಕುಳಿತಿದ್ದಾರೆ. ಅವರೊಂದಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಸೇರಿದ್ದಾರೆ.
ಪ್ರತಿಭಟನೆಯಲ್ಲಿ ಡಿಎಂಕೆ ಮತ್ತು ಎಎಪಿ ಸಂಸದರು ಭಾಗವಹಿಸಿರಲಿಲ್ಲ. ಇನ್ನೂ ಪ್ರತಿಭಟನೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದವರೆಗೆ ಮುಂದುವರಿಸಲು ಪ್ರತಿಪಕ್ಷಗಳು ಸಿದ್ಧವಾಗಿವೆ ಎಂದು ವರದಿಯಾಗಿದೆ. ಆ ದಿಕ್ಕಿನಲ್ಲಿ ಸಿದ್ದತೆ ನಡೆಸಲು ಸೋಮವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸರಣಿ ಪ್ರತಿಭಟನೆ, ಅಭಿಯಾನಗಳನ್ನು ಘೋಷಣೆ ಮಾಡಿದೆ (ಏಜೆನ್ಸೀಸ್).