ಬೆಂಗಳೂರು: ಜೊಮ್ಯಾಟೊ ಡೆಲಿವರಿ ರೈಡರ್(Zomato rider) ಒಬ್ಬರ ಜನ್ಮದಿನವನ್ನು ಗ್ರಾಹಕರು ತಮ್ಮ ಮನೆಯಲ್ಲೇ ಆಚರಿಸುವ ಮೂಲಕ ಮಾನವೀಯತೆ ಮೆರೆದಿರುವ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. "ಇಂತಹ ಜನರು ಎಲ್ಲಿ ಸಿಗುತ್ತಾರೆ?" ಎಂಬ ಶೀರ್ಷಿಕೆಯಡಿ ಹರಿದಾಡುತ್ತಿರುವ ಈ ವಿಡಿಯೋ ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಸಾಮಾನ್ಯವಾಗಿ ಡೆಲಿವರಿ ಬಾಯ್‌ಗಳು ಅತಿ ವೇಗವಾಗಿ ಆಹಾರ ತಲುಪಿಸುವ ಒತ್ತಡದಲ್ಲಿರುತ್ತಾರೆ. ಆದರೆ, ಈ ಘಟನೆಯಲ್ಲಿ ಆರ್ಡರ್ ನೀಡಿದ್ದ ಗ್ರಾಹಕರು ಆ ರೈಡರ್‌ನ ಹುಟ್ಟಿದ ದಿನವೆಂದು ತಿಳಿದು ವಿಶೇಷ ತಯಾರಿ ಮಾಡಿಕೊಂಡಿದ್ದರು. ಡೆಲಿವರಿ ನೀಡಲು ಮನೆಗೆ ಬಂದ ರೈಡರ್‌ನನ್ನು ಒಳಗೆ ಕರೆದ ಗ್ರಾಹಕರು, ಅವರಿಗಾಗಿ ಕೇಕ್ ಸಿದ್ಧಪಡಿಸಿಟ್ಟಿದ್ದರು.
ಯಾವುದೇ ನಿರೀಕ್ಷೆಯಿಲ್ಲದೆ ಬಂದಿದ್ದ ಆ ಡೆಲಿವರಿ ರೈಡರ್, ಗ್ರಾಹಕರ ಈ ಅನಿರೀಕ್ಷಿತ ಪ್ರೀತಿ ಮತ್ತು ಸಂಭ್ರಮವನ್ನು ಕಂಡು ಭಾವುಕರಾದರು. ಗ್ರಾಹಕರು 'ಹ್ಯಾಪಿ ಬರ್ತ್ ಡೇ' ಹಾಡನ್ನು ಹಾಡುತ್ತಾ ಕೇಕ್ ಕತ್ತರಿಸಲು ಹೇಳಿದಾಗ, ಆ ರೈಡರ್ ಸಂತೋಷದಿಂದ ಕಣ್ಣೀರು ಹಾಕಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ವಿಡಿಯೋ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. "ಕಹಾ ಮಿಲ್ತೆ ಹೈ ಐಸೆ ಲೋಗ್" (ಇಂತಹ ಒಳ್ಳೆಯ ಮನಸ್ಸಿನ ಜನರು ಎಲ್ಲಿ ಸಿಗುತ್ತಾರೆ?) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೋಗೆ ಸಾವಿರಾರು ಜನರು ಮೆಚ್ಚುಗೆ ಸೂಚಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆಗಳು
ಇನ್ನು ಈ ವಿಡಿಯೋಗೆ ನೂರಾರು ಕಾಮೆಂಟ್ಗಳು ಬಂದಿದ್ದು, ತೆರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ನಮ್ಮ ಸಮಾಜದಲ್ಲಿ ಇಂದಿಗೂ ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ."ದಿನವಿಡೀ ಬಿಸಿಲು, ಮಳೆ ಎನ್ನದೆ ಕಷ್ಟಪಡುವ ಇವರಿಗೆ ಇಂತಹ ಸಣ್ಣ ಗೌರವ ದೊಡ್ಡ ಸಂತೋಷ ನೀಡುತ್ತದೆ."ಆ ರೈಡರ್ ಮುಖದಲ್ಲಿದ್ದ ಆನಂದದ ಕಣ್ಣೀರು ಜಗತ್ತಿನ ಎಲ್ಲಾ ಸಂಪತ್ತಿಗಿಂತ ಮಿಗಿಲಾದದ್ದು. ಎಂದು ನೆಟ್ಟಿಗರು ಕೊಂಡಿದ್ದಾರೆ.
ಮಾನವೀಯತೆಯ ಸಂದೇಶ
ಇತ್ತೀಚಿನ ದಿನಗಳಲ್ಲಿ ಡೆಲಿವರಿ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳ ನಡುವೆ, ಇಂತಹ ಸಕಾರಾತ್ಮಕ ಸುದ್ದಿಗಳು ಭರವಸೆ ಮೂಡಿಸುತ್ತವೆ. ಕೇವಲ ಗ್ರಾಹಕ ಮತ್ತು ಸೇವೆ ಒದಗಿಸುವವನ ನಡುವಿನ ಸಂಬಂಧಕ್ಕಿಂತ ಮಿಗಿಲಾದ 'ಮನುಷ್ಯತ್ವ' ದೊಡ್ಡದು ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತಿದೆ. ಜೊಮ್ಯಾಟೊ ಸಂಸ್ಥೆಯೂ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ತಮ್ಮ ಸಿಬ್ಬಂದಿಯ ಬಗ್ಗೆ ಇಷ್ಟು ಕಾಳಜಿ ತೋರಿದ ಗ್ರಾಹಕರಿಗೆ ಧನ್ಯವಾದ ಅರ್ಪಿಸಿದೆ,(ಏಜೆನ್ಸೀಸ್).