Delivery Boy Cricket ಚಿತ್ರ Instagram
ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಎಂಬುದು ಕೇವಲ ಒಂದು ಆಟವಲ್ಲ, ಅದೊಂದು ಭಾವನೆ. ಧರ್ಮ, ಜಾತಿ, ವಯಸ್ಸಿನ ಬೇಧವಿಲ್ಲದೆ ಕೋಟ್ಯಂತರ ಜನರನ್ನು ಒಟ್ಟಿಗೆ ಜೋಡಿಸುವ ಶಕ್ತಿ ಈ ಆಟಕ್ಕಿದೆ. ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಕ್ರಿಕೆಟ್ (Delivery Boy Cricket) ಆಳವಾಗಿ ಬೇರೂರಿದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ಪುಟ್ಟ ವಿಡಿಯೋವೊಂದು ದೇಶದ ಜನರ ಕಣ್ಗಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಏನಿದು ಘಟನೆ?
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿತರಣಾ ಏಜೆಂಟ್ ಒಬ್ಬರು ಗ್ರಾಹಕರ ಮನೆ ಬಾಗಿಲಿಗೆ ಬಂದು ಪಾರ್ಸೆಲ್ ತಲುಪಿಸುತ್ತಾರೆ. ಈ ವೇಳೆ ಮನೆಯ ಕಾರಿಡಾರ್ನಲ್ಲಿ ಒಂದು ಕ್ರಿಕೆಟ್ ಬ್ಯಾಟ್ ಇಟ್ಟಿರುವುದನ್ನು ಗಮನಿಸುತ್ತಾರೆ. ನಂತರ ಅವರು ಆ ಬ್ಯಾಟ್ನ್ನು ಕೈಗೆತ್ತಿಕೊಂಡು ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡುತ್ತಿರುವಂತೆ ಪ್ರದರ್ಶಿಸುತ್ತಾರೆ. ನಂತರ ಅದಕ್ಕೆ ಮುತ್ತಿಟ್ಟು ಮೊದಲಿದ್ದ ಜಾಗಕ್ಕೆ ಬ್ಯಾಟ್ ಇಟ್ಟು ಕೆಲಸಕ್ಕೆ ಹೊರಡುತ್ತಾರೆ.
ಈಗ ವೈರಲ್ ಆಗಿರುವ ಈ ವಿಡಿಯೋವನ್ನು ಯುಟಿಸಿಎ ಚಂಡೀಗಢ ಕ್ರಿಕೆಟ್ ಸಾಮಾಜಿಕ ಮಾಧ್ಯಮ ತಂಡದ ಸದಸ್ಯೆ ರಿಷು ಚೋಪ್ರಾ ಹಂಚಿಕೊಂಡು, ವಿಡಿಯೋದಲ್ಲಿರುವ ವ್ಯಕ್ತಿಗೆ ಅಸೋಸಿಯೇಷನ್ನೊಂದಿಗೆ ಯಾವುದೇ ಸಂಬಂಧವಿಲ್ಲ. ಈ ರೀಲ್ ಭಾವನೆ ಮತ್ತು ಸ್ಪೂರ್ತಿಯನ್ನು ಹೊಂದಿರುವುದರಿಂದ ಹಂಚಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ಕ್ರಿಕೆಟ್ ಬಗ್ಗೆ ಇರುವ ಒಲವನ್ನು ಎತ್ತಿ ತೋರಿಸಿದ್ದಾರೆ. ಪ್ರತಿಯೊಬ್ಬ ಭಾರತೀಯ ಯುವಕನೂ ಒಂದಲ್ಲ ಒಂದು ದಿನ ಕ್ರಿಕೆಟರ್ ಆಗಬೇಕೆಂದು ಕನಸು ಕಂಡಿರುತ್ತಾನೆ. ಪರಿಸ್ಥಿತಿ ಮತ್ತು ಜವಾಬ್ದಾರಿಗಳು ನಮ್ಮನ್ನು ಬೇರೆಡೆಗೆ ಕೊಂಡೊಯ್ಯಬಹುದು, ಆದರೆ ಒಳಗಿರುವ ಕ್ರಿಕೆಟಿಗ ಎಂದಿಗೂ ಸಾಯುವುದಿಲ್ಲ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇನ್ನೊಬ್ಬ ಬಳಕೆದಾರರು ಡೆಲಿವರಿ ಬಾಯ್ಗೆ ಬ್ಯಾಟ್ನ್ನು ಉಡುಗೊರೆಯಾಗಿ ನೀಡಬಹುದು. ಆದರೆ, ಅವರು ಕಳೆದುಕೊಂಡ ವರ್ಷಗಳ ಜವಬ್ದಾರಿಗಳನ್ನು ಯಾರು ಹಿಂದಿರುಗಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಕ್ರಿಕೆಟ್ ಎಂಬುದು ಭಾರತೀಯರ ಉಸಿರು
ಈ ವೀಡಿಯೊ ಕೇವಲ ಒಬ್ಬ ಡೆಲಿವರಿ ಎಕ್ಸಿಕ್ಯೂಟಿವ್ ಕಥೆಯಲ್ಲ, ಬದಲಿಗೆ ಭಾರತದ ಪ್ರತಿ ಗಲ್ಲಿಯಲ್ಲೂ ಇರುವ ಸಾವಿರಾರು ಯುವಕರ ಕಥೆಯಾಗಿದೆ. ಆರ್ಥಿಕ ಪರಿಸ್ಥಿತಿ, ಕೌಟುಂಬಿಕ ಜವಾಬ್ದಾರಿಗಳು ಅಥವಾ ವೈಯಕ್ತಿಕ ಸವಾಲುಗಳಿಂದಾಗಿ ತಮ್ಮ ಕ್ರೀಡಾ ಕನಸುಗಳನ್ನು ಬದಿಗಿಟ್ಟು ದುಡಿಯುತ್ತಿರುವ ಎಷ್ಟೋ ಜನರಿಗೆ ಈ ವೀಡಿಯೊ ತಮ್ಮದೇ ಕನ್ನಡಿಯಂತೆ ಭಾಸವಾಗಿದೆ (ಏಜೆನ್ಸೀಸ್).