ಯುವತಿಯ ಪ್ರಾಣ ಉಳಿಸಿದ ಡೆಲಿವರಿ ಬಾಯ್
- ಮಾನವೀಯತೆ ತೋರಿದ ಡೆಲಿವರಿ ಬಾಯ್
- ಯುವತಿ ಆರ್ಡರ್ ಮಾಡಿದ್ದ ವಸ್ತು ಕೊಡಲು ನಿರಾಕರಣೆ
- ಸಾಯಲು ನಿರ್ಧರಿಸಿದ್ದ ಯುವತಿಗೆ ಬುದ್ಧಿ ಮಾತುಗಳ ಕಿವಿಮಾತು
- ಕಣ್ಣೀರಿಡುತ್ತಿದ್ದ ಯುವತಿಯೊಂದಿಗೆ ಮಾತನಾಡಿ, ಕಡೆಗೂ ಆಕೆಯ ಜೀವ ಉಳಿಸಿದ
ತಮಿಳುನಾಡು: ಯಾರಾದರೂ ನಮಗೆ ಹತ್ತಿರವಾದರೂ ಅಥವಾ ನಮ್ಮ ಮನಸ್ಸಿಗೆ ತುಂಬ ಆಪ್ತರಾದವರು ಏನಾದರೂ ಸಮಸ್ಯೆಯಲ್ಲಿ ಸಿಲುಕಿದ್ದರೆ ಅಥವಾ ಅದರಿಂದ ಹೊರಬರಲಾಗದೆ, ಸಂಕಷ್ಟದಲ್ಲಿ ಪರದಾಡುತ್ತಿದ್ದರೆ ನಾವು ಅವರಿಗೆ ನಮ್ಮಿಂದ ಏನೆಲ್ಲ ಸಹಾಯ ಮಾಡಬಹುದು ಅದನ್ನು ಖಂಡಿತವಾಗಿ ಮಾಡ್ತೇವೆ. ಆದರೆ, ಅದೇ ತಿಳಿಯದ ವ್ಯಕ್ತಿ ಅಥವಾ ಅನಾಮಧೇಯ ವ್ಯಕ್ತಿಗಳು ನಾನಿಂತ ಕೆಟ್ಟ ಪರಿಸ್ಥಿತಿಯಲ್ಲಿದ್ದೇನೆ ಎಂದು ಹೇಳಿಕೊಂಡರೂ ಸಹಾಯಹಸ್ತಕ್ಕೆ ಮುಂದೆ ಬರುವುದಿಲ್ಲ. ಕಾರಣ, ನಂಬಿಕೆ ಮತ್ತು ಪರಿಚಯದ ಸಮಸ್ಯೆ
ಆದರೆ, ಇತ್ತೀಚಿನ ದಿನಗಳಲ್ಲಿ, ನಿಜಕ್ಕೂ ಒಳ್ಳೆಯ ಮನಸ್ಸಿನ ಜನರಿದ್ದಾರೆ ಎಂಬುದಕ್ಕೆ ಇಲ್ಲೊಬ್ಬ ಡೆಲಿವರಿ ಬಾಯ್ ಮಾಡಿರುವ ಕೆಲಸವೇ ಜ್ವಲಂತ ಸಾಕ್ಷಿ. ಈತನ ಕೆಲಸ ನಿಜಕ್ಕೂ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ತಡರಾತ್ರಿ ಬ್ಲಿಂಕ್ಇಟ್ ಆ್ಯಪ್ನಲ್ಲಿ ಇಲಿ ಪಾಷಾಣ ಬುಕ್ ಮಾಡಿದ ಯುವತಿಯ ಆರ್ಡರ್ ಕೈಗೆತ್ತಿಕೊಂಡ ಯುವಕ, ಇದನ್ನು ಪಿಕ್ ಮಾಡಿದ್ದೇ ಆದರೂ ಆಕೆಯ ಕೈಗೆ ತಲುಪಿಸಲು ನಿರಾಕರಿಸಿದ. ಕಾರಣ, ಇಷ್ಟೊತ್ತಿನಲ್ಲಿ ಇಲಿ ಪಾಷಾಣವೇಕೆ ಎಂಬ ಅನುಮಾನ.
ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆಯ ಆರ್ಡರ್ ಸ್ವೀಕರಿಸಿದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಹೋದ ಡೆಲಿವರಿ ಬಾಯ್, ಯುವತಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ. ಈ ವೇಳೆ, ಆಕೆ ದುಃಖದಲ್ಲಿರುವುದು ಅವಳ ಧ್ವನಿಯಲ್ಲಿ ಗೊತ್ತಾಗಿದೆ. ಕೂಡಲೇ, ಏನಾಯಿತು ಮೇಡಂ ಎಂದು ಮಾತನಾಡಿಸಿದಾಗ, ಯುವತಿ ಕಣ್ಣೀರಿಡುತ್ತಲೇ ತನ್ನ ಸಾಯುವ ನಿರ್ಧಾರವನ್ನು ಬಿಚ್ಚಿಟ್ಟಳು. ಇದನ್ನು ಅರಿತ ಡೆಲಿವರಿ ಬಾಯ್, ವಸ್ತುವನ್ನು ಕೊಡದೆ ಆಕೆಯ ನಿರ್ಧಾರವನ್ನು ಬದಲಿಸಿದ್ದು ಸದ್ಯ ನೆಟ್ಟಿಗರ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ,(ಏಜೆನ್ಸೀಸ್).