Doorstep Delivery (ಚಿತ್ರ X)
Doorstep Delivery: ಡೆಲಿವರಿ ಏಜೆಂಟ್‌ಗಳು ಮನೆಬಾಗಿಲಿಗೆ ಬಂದು ಪಾರ್ಸಲ್ ತಲುಪಿಸುವ ಸೇವೆಗಳು ನಮ್ಮ ದಿನನಿತ್ಯದ ಜೀವನದ ಪ್ರಮುಖ ಭಾಗವಾಗಿವೆ. ಆದರೆ ಇದೇ ಸೇವೆಗೆ ಸಂಬಂಧಿಸಿದಂತೆ ಭದ್ರತೆಯ ಪ್ರಶ್ನೆಗಳು ಎದ್ದು ಕಾಣುವಂತಹ ಘಟನೆಯೊಂದು ಇತ್ತೀಚೆಗೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಾರ್ಸಲ್ ನೀಡುವ ನೆಪದಲ್ಲಿ ಗ್ರಾಹಕರ ಮನೆಯೊಳಗೆ ಪ್ರವೇಶಿಸಲು ಯತ್ನಿಸಿದ ಡೆಲಿವರಿ ಏಜೆಂಟ್ ಒಬ್ಬನ ಸಿಸಿಟಿವಿ ದೃಶ್ಯಾವಳಿ ಈಗ ವೈರಲ್ ಆಗಿದೆ.
ಏನಿದು ಘಟನೆ?
ವೈರಲ್ ಆಗುತ್ತಿರುವ ಸಿಸಿಟಿವಿ ದೃಶ್ಯಾವಳಿಯ ಪ್ರಕಾರ, ಡೆಲಿವರಿ ಬಾಯ್ ಒಬ್ಬರು ಪಾರ್ಸಲ್ ನೀಡಲು ಮನೆಗೆ ಆಗಮಿಸುತ್ತಾರೆ. ಈ ವೇಳೆ ಮನೆಯಲ್ಲಿದ್ದ ಸಣ್ಣ ಬಾಲಕಿಯೊಬ್ಬಳು ಪಾರ್ಸಲ್ ಸ್ವೀಕರಿಸಲು ಬಾಗಿಲಿನ ಬಳಿ ಬರುತ್ತಾಳೆ. ಪಾರ್ಸಲ್ ನೀಡಿದ ನಂತರ, ಡೆಲಿವರಿ ಏಜೆಂಟ್ ತನ್ನ ಬಳಿ ಇರುವ ಆ್ಯಪ್‌ನಲ್ಲಿ 'ಪ್ರೂಫ್ ಆಫ್ ಡೆಲಿವರಿ' ಸ್ಪಷ್ಟವಾಗಿ ಬರಲಿಲ್ಲ ಎಂಬ ನೆಪ ಒಡ್ಡುತ್ತಾನೆ. ಫೋಟೋ ಸರಿಯಾಗಿ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾ, ಆತ ಮನೆಯ ಪ್ರವೇಶದ್ವಾರಕ್ಕೆ ಮತ್ತಷ್ಟು ಹತ್ತಿರ ಹೋಗಲು ಯತ್ನಿಸುತ್ತಾನೆ.
ಬಾಲಕಿಯು ಗೇಟ್‌ನಲ್ಲೇ ಪಾರ್ಸಲ್ ನೀಡಿ ಹೋಗುವಂತೆ ಸ್ಪಷ್ಟವಾಗಿ ತಿಳಿಸಿದರೂ, ಆ ವ್ಯಕ್ತಿ ಅದನ್ನು ನಿರ್ಲಕ್ಷಿಸಿ ಸತತವಾಗಿ ಮನೆಯೊಳಗೆ ಹೆಜ್ಜೆ ಇಡಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ತಾಯಿಯ ಸಮಯಪ್ರಜ್ಞೆ ಮತ್ತು ಬಚಾವಾದ ಕುಟುಂಬ
ಅದೃಷ್ಟವಶಾತ್, ಡೆಲಿವರಿ ಏಜೆಂಟ್ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಬಾಲಕಿಯ ತಾಯಿ ಕೂಡಲೇ ಹೊರಗೆ ಬಂದು, ಆತನನ್ನು ಬಾಗಿಲಿನ ಬಳಿಯೇ ನಿಲ್ಲುವಂತೆ ಗಟ್ಟಿಯಾಗಿ ಸೂಚನೆ ನೀಡುತ್ತಾರೆ. ತಾಯಿಯ ಸಮಯಪ್ರಜ್ಞೆಯಿಂದಾಗಿ ಯಾವುದೇ ಅನಾಹುತ ಸಂಭವಿಸದೆ ಕುಟುಂಬವು ಪಾರಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ ಡೆಲಿವರಿ ಏಜೆಂಟ್ ಗ್ರಾಹಕರ ಮನೆಗೆ ಪ್ರವೇಶಿಸಲು ಎಂದಿಗೂ ಪ್ರಯತ್ನಿಸಬಾರದಿತ್ತು ಎಂದು ಪ್ರತಿಕ್ರಿಯಿಸಿದರೆ, ಇನ್ನೊಬ್ಬ ಬಳಕೆದಾರ ವಿತರಣಾ ಪುರಾವೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿರಬಹುದು ಮತ್ತು ಯಾವುದೇ ಹಾನಿ ಮಾಡುವ ಉದ್ದೇಶವನ್ನು ಹೊಂದಿರದಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.
ಮೂರನೇ ಬಳಕೆದಾರರು ಡೆಲಿವರಿ ಏಜೆಂಟ್ ಕೇವಲ ತನ್ನ ಆ್ಯಪ್‌ನಲ್ಲಿ ಫೋಟೋ ಸ್ಪಷ್ಟವಾಗಿ ಬರಲು ಹತ್ತಿರ ಹೋಗಲು ಯತ್ನಿಸುತ್ತಿದ್ದನೇ ವಿನಃ ಆತನಿಗೆ ಯಾವುದೇ ಕೆಟ್ಟ ಉದ್ದೇಶ ಇರದೇ ಇರಬಹುದು ಎಂಬ ಸಾಧ್ಯತೆಯನ್ನು ಇವರು ಒಪ್ಪಿಕೊಳ್ಳುತ್ತಾರೆ. ಆದರೆ, ಅಪರಿಚಿತರ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವ ಬದಲು, ಅನುಮಾನ ಬಂದಾಗ ಅತಿಯಾದ ಎಚ್ಚರಿಕೆ ವಹಿಸುವುದೇ ಒಳ್ಳೆಯದು ಎಂದು ಅವರು ಪ್ರತಿಪಾದಿಸುತ್ತಾರೆ (ಏಜೆನ್ಸೀಸ್).