ಪ್ರಧಾನಿ ನರೇಂದ್ರ ಮೋದಿ 
ದೇಶ

ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತ ರಾಜ್ಯಗಳ ಸ್ಥಾನಗಳ ಸಂಖ್ಯೆ ಕಡಿತವಾಗಲ್ಲ; ಪ್ರಧಾನಿ ಮೋದಿ | PM Modi

ತಿರುವನಂತಪುರಂ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ಯಶಸ್ವಿಯಾಗಿ ಜನಸಂಖ್ಯೆಯನ್ನು ನಿಯಂತ್ರಣ ಮಾಡಿದ ದಕ್ಷಿಣ ಭಾರತ ರಾಜ್ಯಗಳು ತಮ್ಮ ಸಂಸದೀಯ ಸ್ಥಾನಗಳನ್ನು ಕಳೆದುಕೊಳ್ಳುತ್ತವೆ ಎಂಬ ಪ್ರಚಾರವನ್ನು ಅಲ್ಲಗೆಳೆದಿರುವ ಪ್ರಧಾನಿ ಮೋದಿ(PM Modi), ದಕ್ಷಿಣ ರಾಜ್ಯಗಳ ಸಂಸದೀಯ ಸ್ಥಾನಗಳಲ್ಲಿ ಯಾವುದೇ ಕಡಿತವಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಕೇರಳದ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ಶನಿವಾರ(ಏ. 04) ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಲೋಕಸಭಾ ಸ್ಥಾನಗಳ ಹೆಚ್ಚಳದಿಂದ ಎಲ್ಲಾ ರಾಜ್ಯಗಳು ಪ್ರಯೋಜನ ಪಡೆಯುತ್ತವೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಹಾಗೂ ಇತರ ರಾಜ್ಯಗಳು ತಮ್ಮ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗಿದ್ದರೂ, ಈ ರಾಜ್ಯಗಳ ಲೋಕಸಭಾ ಸ್ಥಾನಗಳು ಕಡಿಮೆಯಾಗುವುದಿಲ್ಲ ಎಂದಿದ್ದಾರೆ.
ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ರಕ್ಷಿಸಲು ಸಂಸತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ರಚಿಸಲು ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಲು ಈ ತಿಂಗಳು 16-18 ರಿಂದ ಸಂಸತ್ ಅಧಿವೇಶನವನ್ನು ಕರೆಯಲಾಗಿದೆ ಎಂದು ಹೇಳಿದ್ದಾರೆ.
ಕ್ಷೇತ್ರಗಳ ಪುನರ್ವಿಂಗಡಣೆಯಿಂದ ಲೋಕಸಭಾ ಸ್ಥಾನಗಳ ಸಂಖ್ಯೆ 543 ರಿಂದ 816 ಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ. ಈ ನಡುವೆ ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ಪುನರ್ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಲೋಕಸಭಾ ಸ್ಥಾನಗಳು ಕಡಿಮೆಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು (ಏಜೆನ್ಸೀಸ್).