ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

ಲೋಕಸಭೆಯಲ್ಲಿ ಡಿಲಿಮಿಟೇಷನ್ ಬಿಲ್​ ಫೇಲ್; ಭಾರತದ ಒಕ್ಕೂಟ ವ್ಯವಸ್ಥೆಗೆ ಸಿಕ್ಕ ಜಯ ಎಂದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ | CM M K Stalin

ಚೆನ್ನೈ: ಕ್ಷೇತ್ರ ಪುನರ್ವಿಂಗಡಣೆಯ ಮಸೂದೆಯ ಸೋಲು ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ತತ್ವಗಳಿಗೆ ಸಂದ ಜಯ ಎಂದು ಶುಕ್ರವಾರ(ಏ. 17) ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಬಣ್ಣಿಸಿದ್ದಾರೆ.  ಕ್ಷೇತ್ರ ಪುನರ್ವಿಂಗಡಣೆ ವಿಷಯದ ಬಗ್ಗೆ ದಕ್ಷಿಣ ರಾಜ್ಯಗಳು ಒಂದೇ ಧ್ವನಿಯಲ್ಲಿ ಹೋರಾಟ ಮಾಡಿವೆ. 
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕ್ಷೇತ್ರ ಪುನರ್ವಿಂಗಡೆ ನಿರ್ಣಯವು ಭಾರತದ ಪ್ರಜಾಪ್ರಭುತ್ವದಲ್ಲಿ ಯಾರಿಗೆ ಧ್ವನಿ ಸಿಗುತ್ತದೆ ಮತ್ತು ಪ್ರಾತಿನಿಧ್ಯ ಎಷ್ಟು ಎಂಬುದರ ಬಗ್ಗೆ ನಿರ್ಧರಿಸುತ್ತದೆ. ಅದು ಒಕ್ಕೂಟವನ್ನು ಬಲಪಡಿಸಬೇಕು, ದುರ್ಬಲಗೊಳಿಸಬಾರದು. ಪೆರಿಯಾರ್ ಅವರ ಮಾರ್ಗದರ್ಶನ, ಅಣ್ಣಾ ಅವರ ಸ್ಪೂರ್ತಿ ಹಾಗೂ ಕಲೈನಾರ್ ಅವರಿಂದ ಬಲಗೊಂಡ ತಮಿಳುನಾಡು ಎಂದಿಗೂ ನ್ಯಾಯ, ಘನತೆ ಹಾಗೂ ಒಕ್ಕೂಟವಾದಕ್ಕಾಗಿ ನಿಂತಿದೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತ ಒಗ್ಗಟ್ಟಿನಿಂದ ನಿಂತು ತನ್ನ ಧ್ವನಿಯನ್ನು ಎತ್ತಿತ್ತು. ಪ್ರಜಾಪ್ರಭುತ್ವ ಮೇಲುಗೈ ಸಾಧಿಸಿತು. ತಮಿಳುನಾಡು ಎಂದಿಗೂ ತಾತ್ವಿಕವಾಗಿ ಗಡಿ ನಿರ್ಣಯವನ್ನು ವಿರೋಧಿಸಿಲ್ಲ. ಆದರೆ ನ್ಯಾಯಯುತ, ಸಮಾಲೋಚನಾಶೀಲ ಮತ್ತು ಸರಿಯಾದ ಪ್ರಕ್ರಿಯೆಗೆ ಕರೆ ನೀಡಿದೆ. ರಾಜಕೀಯ ಲಾಭಕ್ಕಾಗಿ ಜಾರಿಗೆ ತರುವ ಯಾವುದೇ ಪ್ರಯತ್ನವು ಸಹಕಾರಿ ಒಕ್ಕೂಟದ ಮನೋಭಾವಕ್ಕೆ ವಿರುದ್ಧವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. 
ತಮಿಳುನಾಡಿನ ತನ್ನ ಹಕ್ಕುಗಳನ್ನು ಪ್ರಶ್ನಿಸಿದಾಗಲೆಲ್ಲಾ, ಅದರ ಗುರುತು ಅಥವಾ ಸಂಸ್ಕೃತಿಯನ್ನು ಪ್ರಶ್ನಿಸಿದಾಗಲೆಲ್ಲಾ ಅಥವಾ ಭಾರತದ ಒಕ್ಕೂಟ ಮನೋಭಾವವನ್ನು ಪರೀಕ್ಷಿಸಿದಾಗಲೆಲ್ಲಾ ಒಗ್ಗಟ್ಟಿನಿಂದ ಅದು ಎದ್ದು ನಿಲ್ಲುತ್ತದೆ. ಈ ಗೆಲುವಿನಲ್ಲಿ ಒಗ್ಗಟ್ಟಿನಿಂದ ನಿಂತ ಎಲ್ಲಾ ವಿರೋಧ ಪಕ್ಷಗಳಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಲೋಕಸಭೆಯ 543 ಸ್ಥಾನಗಳನ್ನು 850ಕ್ಕೆ ಹೆಚ್ಚಿಸುವ ಕ್ಷೇತ್ರ ಪುನರ್ವಿಂಗಡಣೆ ಕಾಯ್ದೆ ಮತ್ತು ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮಂಡಿಸಿದ್ದ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯೂ ಲೋಕಸಭೆಯಲ್ಲಿ ವಿಪಕ್ಷಗಳ ಅಸಹಕಾರದಿಂದ ಅಗತ್ಯವಿದ್ದ ಮೂರನೇ ಎರಡರಷ್ಟು (2/3) ಬಹುಮತ ಪಡೆಯುವಲ್ಲಿ ವಿಫಲವಾಯಿತು (ಏಜೆನ್ಸೀಸ್).