ನವದೆಹಲಿ: ದೆಹಲಿ ಮೆಟ್ರೋ ಪ್ರಯಾಣದ (
ಸಮಯದಲ್ಲಿ ಇಬ್ಬರು ಯುವತಿಯರನ್ನು ವ್ಯಕ್ತಿಯೊಬ್ಬ ಅವರ ಅನುಮತಿಯಿಲ್ಲದೆ ರಹಸ್ಯವಾಗಿ ವೀಡಿಯೊ ರೆಕಾರ್ಡ್ ಮಾಡಿದ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ
ವರದಿಗಳ ಪ್ರಕಾರ, ಯುವತಿಯರಿಬ್ಬರು ಸಂಜೆ ವೇಳೆಗೆ ಲೋಕನಾಯಕ್ ಭವನ ಮೆಟ್ರೋ ನಿಲ್ದಾಣದಿಂದ ಗ್ರೀನ್ ಪಾರ್ಕ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಹತ್ತಿರದಲ್ಲೇ ಕುಳಿತಿದ್ದ ವ್ಯಕ್ತಿಯೊಬ್ಬ ತಮ್ಮ ಅನುಮತಿಯಿಲ್ಲದೆ ಫೋಟೋ ಮತ್ತು ವೀಡಿಯೊಗಳನ್ನು ಸೆರೆಹಿಡಿಯುವುದನ್ನು ಗಮನಿಸಿದ್ದಾರೆ. ಆದಾಗ್ಯೂ, ಯುವತಿಯರು ಆತನನ್ನು ಗಮನಿಸುತ್ತಿದ್ದಾರೆ ಎಂದು ತಿಳಿದ ಮೇಲೂ ಆ ವ್ಯಕ್ತಿ ಯಾವುದೇ ಹಿಂಜರಿಕರಯಿಲ್ಲದೇ ದಿಟ್ಟಿಸಿ ನೋಡುತ್ತಿದ್ದನು ಎಂದು ಹೇಳಿದ್ದಾರೆ.
ಸಿಕ್ಕಿಬಿದ್ದದ್ದು ಹೇಗೆ?
ವ್ಯಕ್ತಿಯ ಅಸಭ್ಯ ವರ್ತನೆಯಿಂದ ಕೋಪಗೊಂಡ ಯುವತಿಯರು ಆತನನ್ನು ನೇರವಾಗಿ ಪ್ರಶ್ನಿಸಿ, ಮೊಬೈಲ್ ಫೋನ್ ತೋರಿಸುವಂತೆ ಪಟ್ಟು ಹಿಡಿದಿದ್ದಾರೆ. ಮೊದಲಿಗೆ ನಾನು ಯಾವುದೇ ರೀತಿಯಲ್ಲೂ ಫೋಟೋ ತೆಗೆದಿಲ್ಲ ಎಂದು ನಿರಾಕರಿಸಿ ವ್ಯಕ್ತಿ ಯುವತಿಯರು ನೋಡುತ್ತಿದ್ದಂತೆಯೇ ಗಲಿಬಿಲಿಯಿಂದ ತನ್ನ ಫೋನ್‌ನಲ್ಲಿದ್ದ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.
ಆದಾಗ್ಯೂ, ಫೋಟೋಗಳನ್ನು ಡಿಲೀಟ್ ಮಾಡಿದ್ದೇನೆ ಎಂದು ಭಾವಿಸಿ ಆತ ಫೋನ್ ತೋರಿಸಿದಾಗ, ಚಾಣಾಕ್ಷ ಯುವತಿಯರು ಫೋನ್‌ನ 'ರಿಸೈಕಲ್ ಬಿನ್' ವಿಭಾಗವನ್ನು ಪರಿಶೀಲಿಸಿದರು. ಅಲ್ಲಿ ಆತ ರಹಸ್ಯವಾಗಿ ತೆಗೆದಿದ್ದ ವೀಡಿಯೊ ಹಾಗೇ ಇರುವುದು ಪತ್ತೆಯಾಯಿತು. "ಯಾರದೇ ಅನುಮತಿಯಿಲ್ಲದೆ ಫೋಟೋ ಅಥವಾ ವೀಡಿಯೊ ಚಿತ್ರೀಕರಿಸುವುದು ಅಪರಾಧ ಹಾಗೂ ತಪ್ಪು" ಎಂದು ಯುವತಿಯರು ಆತನಿಗೆ ಬೈದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ಇಡೀ ಘಟನೆಯನ್ನು ವೀಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, "ಮಹಿಳೆಯರಿಗೆ ನಿಜಕ್ಕೂ ಎಂದಾದರೂ ಸುರಕ್ಷತೆ ಸಿಗಲು ಸಾಧ್ಯವೇ?" ಎಂಬ ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಭದ್ರತೆ ಮತ್ತು ಖಾಸಗಿತನದ ಬಗ್ಗೆ ಮತ್ತೆ ದೊಡ್ಡ ಮಟ್ಟದ ಚರ್ಚೆ ಪ್ರಾರಂಭವಾಗಿದೆ.
ನೆಟ್ಟಿಗರು ವ್ಯಕ್ತಿಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಖಾಸಗಿತನವನ್ನು ಗೌರವಿಸುವುದು ಮತ್ತು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುವುದು ಅತ್ಯಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ (ಏಜೆನ್ಸೀಸ್).