- ದೈನಂದಿನ ಖರ್ಚಿಗೆ UPI ಬದಲಿಗೆ ನಗದು ಬಳಕೆ ಬಗ್ಗೆ ಮಾಹಿತಿ ಹಂಚಿಕೊಂಡ ದೆಹಲಿಯ ಕಾಂಟೆಂಟ್ ಕ್ರಿಯೇಟರ್.
- ನಗದು ಬಳಸುವುದರಿಂದ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬ ಬಗ್ಗೆ ಹೆಚ್ಚಿನ ಅರಿವು ಮೂಡಿದೆ ಎಂದ ಸದಾಫ್.
- ಶೇಕಡಾ 80ರಷ್ಟು ನಗದು ಹಾಗೂ ಶೇಕಡಾ 20ರಷ್ಟು UPI ಬಳಸಬಹುದು ಎಂದ ಯುವತಿ.
UPI vs Cash experiment: ಇತ್ತೀಚಿನ ದಿನಗಳಲ್ಲಿ ಯುಪಿಐ ಬಳಕೆ ಸರ್ವಂತರ್ಯಾಮಿಯಾಗಿದೆ. 5ರೂ. ಪಾವತಿಗೂ ಆನ್‌ಲೈನ್ ಮೂಲಕ ಖರ್ಚು ಮಾಡುವ ಪದ್ಧತಿಯನ್ನು ಆರಿಸಿಕೊಂಡಿದ್ದೇವೆ. ಕಾಫಿ, ಟೀ ಖರ್ಚು, ತರಕಾರಿ ಹೀಗೆ ನಾನಾ ವಿಚಾರಕ್ಕೆ ಯುಪಿಐ ಬಳಕೆ ಮಾಡಿ ಹಣ ಎಲ್ಲಿ ಹೋಗುತ್ತದೆ ಎನ್ನುವ ಅರಿವೇ ಇಲ್ಲದಂತಾಗುತ್ತದೆ.
ಹೀಗಾಗಿ ದೆಹಲಿ ಮಹಿಳೆಯೊಬ್ಬರು
UPI ಬಳಕೆ ನಿಲ್ಲಿಸಿ, ನಗದು ಹಣವನ್ನೇ ಬಳಸಲು ಆರಂಭಿಸಿದ ನಂತರ ತಮ್ಮಲ್ಲಾದ ಬದಲಾವಣೆ ಏನು ಎಂಬುದರ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನೂರಾರು ಮಂದಿ ಅವರ ಈ ಪ್ರಯೋಗಕ್ಕೆ ಸರಿಯಾದ ಮಾರ್ಗ ಎಂದು ತಲೆಯಾಡಿಸಿದ್ದಾರೆ.
ದೆಹಲಿಯ ಕಾಂಟೆಂಟ್ ಕ್ರಿಯೇಟರ್ ಸದಾಫ್ ಎಂಬುವವರು ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ತಮ್ಮ ಹೆಚ್ಚಿನ ಖರ್ಚುಗಳಿಗೆ ಡಿಜಿಟಲ್ ಪಾವತಿ ಬದಲು ನಗದನ್ನೇ ಬಳಸುತ್ತಿದ್ದು, ಇದು ತಮ್ಮ ಖರ್ಚು ಮಾಡುವ ಅಭ್ಯಾಸವನ್ನೇ ಬದಲಾಯಿಸಿದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.
ಕಾಂಟೆಂಟ್ ಕ್ರಿಯೇಟರ್ ಹೇಳಿದ್ದೇನು?
UPI ಪಾವತಿಗಳು ಕೆಲವೇ ಸೆಕೆಂಡುಗಳಲ್ಲಿ ನಡೆಯುವುದರಿಂದ ಸಣ್ಣಪುಟ್ಟ ಖರ್ಚುಗಳು ಗಮನಕ್ಕೆ ಬರುವುದಿಲ್ಲ.
ಉದಾಹರಣೆಗೆ ಕಾಫಿ, ತಿಂಡಿ ಹಾಗೂ ಇತರೆ ಆನ್‌ಲೈನ್ ಖರೀದಿಯಂತಹ ಸಣ್ಣ ಪಾವತಿಗಳು ಯಾವುದೇ ದೊಡ್ಡ ಖರ್ಚಿನ ಅನುಭವ ನೀಡದೆ ಕ್ಷಣಾರ್ಧದಲ್ಲಿ ಸಾವಿರ ರೂಪಾಯಿಗಳವರೆಗೆ ಖರ್ಚಾಗಿಬಿಡುತ್ತವೆ. ಆದರೆ ನಗದು ಬಳಸುವಾಗ 500 ರೂಪಾಯಿಯ ನೋಟನ್ನು ನೇರವಾಗಿ ಕೈಯಿಂದ ನೀಡುವಾಗ, ನಮ್ಮ ವ್ಯಾಲೆಟ್‌ನಿಂದ ಎಷ್ಟು ಹಣ ಖಾಲಿಯಾಗಿದೆ ಮತ್ತು ಎಷ್ಟು ಉಳಿದಿದೆ ಎಂಬ ವಾಸ್ತವ ಅರಿವಾಗುತ್ತದೆ
. ಈ ಪ್ರಜ್ಞಾಪೂರ್ವಕ ಬದಲಾವಣೆಯು ತನ್ನ ಅನಗತ್ಯ ಆವೇಗದ ಖರೀದಿಗಳನ್ನು ಕಡಿಮೆ ಮಾಡಲು ಮತ್ತು ಬ್ಯಾಂಕ್ ಆ್ಯಪ್‌ಗಳನ್ನು ಪದೇ ಪದೇ ಪರಿಶೀಲಿಸದೆ ಸುಲಭವಾಗಿ ಬಜೆಟ್ ನಿರ್ವಹಿಸಲು ಸಹಾಯ ಮಾಡಿದೆ ಎಂದು ಯುವತಿ ಹೇಳಿದ್ದಾರೆ.
ಸಂಪೂರ್ಣವಾಗಿ UPI ಬಳಕೆ ನಿಲ್ಲಿಸೋದು ಕಷ್ಟ
ಸಂಪೂರ್ಣವಾಗಿ UPI ತ್ಯಜಿಸುವುದು ಪ್ರಾಯೋಗಿಕವಾಗಿ ಕಷ್ಟಕರ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ. ಉದಾಹರಣೆಗೆ, ಬಿಲ್ 470 ರೂ. ಆಗಿದ್ದು ನಮ್ಮ ಬಳಿ 500 ರೂ. ಇದ್ದಾಗ ಚಿಲ್ಲರೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಅವರು ಮಧ್ಯಮ ಮಾರ್ಗವನ್ನು ಅನುಸರಿಸಿದ್ದು, ಶೇಕಡಾ 80 ರಷ್ಟು ಹಣವನ್ನು ನಗದಾಗಿ ಮತ್ತು ಶೇಕಡಾ 20 ರಷ್ಟು ಹಣವನ್ನು ಅನಿವಾರ್ಯ ಸಂದರ್ಭಗಳಿಗಾಗಿ UPI ನಲ್ಲೇ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗದು ಬಳಕೆ ಹಣದ ಖರ್ಚಿನ ಬಗ್ಗೆ ಹೆಚ್ಚು ಎಚ್ಚರಿಕೆ ಮೂಡಿಸುತ್ತದೆ ಎಂದು ಹಲವರು ಬೆಂಬಲಿಸಿದ್ದಾರೆ. ಡಿಜಿಟಲ್ ಪಾವತಿಗಳು ಹಣ ಖರ್ಚು ಮಾಡುವುದರ ನೋವನ್ನು ಕಡಿಮೆ ಮಾಡುತ್ತದೆ. ಇನ್ನು ಕೆಲವರು ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲೆಡೆ ನಗದು ಸ್ವೀಕರಿಸುವುದು ಕಷ್ಟವಾಗಿದ್ದು, ಬಹುತೇಕ ವ್ಯಾಪಾರಿಗಳು ಡಿಜಿಟಲ್ ಪಾವತಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).