ವೆಬ್ ಸರಣಿಯಲ್ಲಿ ತೋರಿಸಿದಂತೆಯೇ ಪತ್ನಿ ಉಸಿರು ನಿಲ್ಲಿಸಿದ ಪಾಪಿ ಪತಿ
- ಒಂದೇ ಮನೆಯಲ್ಲಿ ವಾಸವಿದ್ದರೂ ಪ್ರತ್ಯೇಕವಾಗಿ ಕರೆಂಟ್ ಬಿಲ್ ಪಾವತಿ
- ಗಂಡ-ಹೆಂಡತಿಯ ವೈಮನಸ್ಸು ಒಂದು ವೆಬ್ ಸರಣಿಯ ಕಥೆಯಿಂದ ಅಂತ್ಯ
- ಪತ್ನಿಯ ಆಸ್ತಿಗಾಗಿ ವೆಬ್ ಸರಣಿ ನೋಡಿಯೇ ಹತ್ಯೆಗೈದ ಪಾಪಿ ಪತಿ
ನವದೆಹಲಿ: ಒಂದೇ ಮನೆಯಲ್ಲಿ ವಾಸವಿದ್ದರೂ ಕರೆಂಟ್ ಬಿಲ್ ಅನ್ನು ಪ್ರತ್ಯೇಕವಾಗಿ ಕಟ್ಟುತ್ತಿದ್ದ ಗಂಡ-ಹೆಂಡತಿ ನಡುವಿನ ವೈಮನಸ್ಸು ಒಂದು ವೆಬ್ ಸರಣಿಯ ಕಥೆಯಿಂದ ಕೊಲೆಯಲ್ಲಿ ಅಂತ್ಯಗೊಂಡಿರುವುದು ಸದ್ಯ ಪೊಲೀಸರನ್ನೇ ಅಕ್ಷರಶಃ ಬೆರಗಾಗಿಸಿದೆ.
ಪತ್ನಿ ಕೋಮಲ ಸಿಂಗ್ ಸಿಂಗ್ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಪಾಪಿ ಪತಿರಾಯ, ಹೆಂಡತಿಯ ಜತೆ ಕೆಲವು ವರ್ಷಗಳಿಂದ ವೈಮನಸ್ಸು ಹೊಂದಿದ್ದ. ಅನ್ಯ ಮಹಿಳೆಯೊಂದಿಗೆ ಗಂಡ ಕಮಲ್ ಸಿಂಗ್ನ ಅನೈತಿಕ ಸಂಬಂಧದ ಬಗ್ಗೆ ತಿಳಿದ ಮೇಲಂತೂ ಇಬ್ಬರ ನಡುವಿನ ದಾಂಪತ್ಯ ಸಂಬಂಧ ಸಂಪೂರ್ಣವಾಗಿ ಅಳಸಿ ಹೋಗಿತ್ತು. ಇದನ್ನೇ ಜಿದ್ದಾಗಿ ಇಟ್ಟುಕೊಂಡು ಹೆಂಡತಿಯನ್ನು ಕೊಲೆಗೈದ ಗಂಡ, ಆಕೆಯನ್ನು ರಕ್ತದ ಮಡುವಿನಲ್ಲಿ ಒದ್ದಾಡಲು ಬಿಟ್ಟು ಓಡಿ ಹೋದ ಘಟನೆ ಸ್ಥಳೀಯರನ್ನೂ ಬೆಚ್ಚಿಬೀಳಿಸಿದೆ.
ಹಿಂದಿನಿಂದ ಕತ್ತಿ ಏಟು
ಜು.30ರಂದು ದೆಹಲಿಯ ನಿವಾಸದಲ್ಲಿ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ಪುತ್ರ ಲೈಬ್ರರಿಗೆ ಹೋದರೆ, ಮಗಳು ಆಫೀಸ್ಗೆ ಕೆಲಸಕ್ಕೆ ಹೋಗಿದ್ದಾಳೆ. ಇದೇ ಸಮಯದಲ್ಲಿ ಮನೆ ಕೆಲಸದಾಕೆ, ಮಧ್ಯಾಹ್ನ 12:25 ಸಮಯದೊಳಗೆ ಕೆಲಸ ಮುಗಿಸಿ ಹೋದ ಬಳಿಕವೇ ಕಮಲ್ ಸಿಂಗ್ ತನ್ನ ಪತ್ನಿ ಕೋಮಲ್ ಕೊಲೆಗೆ ಮಾಸ್ಟರ್ಪ್ಲ್ಯಾನ್ ಪ್ರಯೋಗ ಮಾಡಿದನು. ಬಟ್ಟೆ ಒಣಗಿಸಲು ಮುಂದಾದ ಹೆಂಡತಿಯ ತಲೆಯ ಹಿಂಭಾಕ್ಕೆ ಬಲವಾಗಿ ಕತ್ತಿಯಿಂದ ಹೊಡೆದಿದ್ದಾನೆ. ಏಟು ಬಿದ್ದರೂ ಕುಸಿದು ಬೀಳದ ಕೋಮಲ್, ಜೋರಾಗಿ ಸಹಾಯಕ್ಕಾಗಿ ಚೀರಾಡಿದ್ದಾರೆ. ಈ ಸಂದರ್ಭದಲ್ಲಿ, ಆಕೆಯ ಕೂಗು ಕೇಳಿಸಿದರೂ ಅಕ್ಕಪಕ್ಕದವರಾಗಲಿ, ಕಮಲ್ ಪತಿಯ ಹೆತ್ತವರಾಗಲಿ ಹೊರಬರದಿರುವುದು ದುರಾದೃಷ್ಟಟ.
ಕೋಮಲ್ ಬೆನ್ನತ್ತಿದ ಪಾಪಿ ಪತಿ, ಆಕೆಯ ಕೂದಲನ್ನು ಹಿಡಿದು ಲಿವಿಂಗ್ ರೂಮ್‌ಗೆ ಎಳೆದೊಯ್ದು, ಕತ್ತರಿಯಿಂದ ಹಲವು ಬಾರಿ ಇರಿದು ಭೀಕರವಾಗಿ ಕೊಂದಿದ್ದಾನೆ. ಬಳಿಕ ಸ್ನಾನ ಮಾಡಿ, ರಕ್ತಸಿಕ್ತ ಬಟ್ಟೆ ಹಾಗೂ ಹತ್ಯೆಗೆ ಬಳಸಿದ್ದ ಕತ್ತಿಯನ್ನು ಬ್ಯಾಗ್‌ಗೆ ತುಂಬಿಕೊಂಡು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದ. ಪತ್ನಿಯ ಅಕೌಂಟ್ನಿಂದ ಒಟ್ಟು 12.75 ಲಕ್ಷ ರೂ. ಹೊತ್ತೊಯ್ದ ಕಮಲ್, ರೂಮಿನಲ್ಲಿದ್ದ 5 ಲಕ್ಷ ರೂ. ನಗದು ಹಾಗೂ ಎರಡು ಪ್ರತ್ಯೇಕ ಬ್ಯಾಂಕ್ ಖಾತೆಗಳಿಂದ 7 ಲಕ್ಷ ಡ್ರಾ ಮಾಡಿಕೊಂಡು ನೇಪಾಳಕ್ಕೆ ಹಾರಲು ಸಂಚು ರೂಪಿಸಿದ್ದ ಎಂಬುದನ್ನು ಪೊಲೀಸರು ಕಡೆಗೂ ತನಿಖೆಯಲ್ಲಿ ಬಾಯ್ಬಿಡಿಸಿದ್ದಾರೆ.
ಸಾಕ್ಷ್ಯ ನಾಶಕ್ಕೆ ವೆಬ್ ಸರಣಿಯೇ ಮಾಸ್ಟರ್ ಪ್ಲ್ಯಾನ್!
ಪತ್ನಿಯ ಪ್ರಾಣ ಪಕ್ಷಿ ಹಾರಿದ ಬೆನ್ನಲ್ಲೇ ಕಮಲ್ ಸಿಂಗ್ ಪಕ್ಕಾ ಕ್ರಿಮಿನಲ್‌ನಂತೆ ವರ್ತಿಸಿರುವುದು ಪೊಲೀಸರಿಗೆ ಸ್ಪಷ್ಟವಾಯಿತು. ಹರಿತವಾದ ಕತ್ತಿಯನ್ನು ಮತ್ತು ರಕ್ತಸಿಕ್ತ ಬಟ್ಟೆಯನ್ನು ಎಸೆದು ಪರಾರಿಯಾದ ಆರೋಪಿಯ ಸುಳಿವಿಗಾಗಿ ಸಿಸಿಟಿವಿ ಹಾಗೂ ತಾಂತ್ರಿಕ ಕಣ್ಣಗಾವಲಿನ ಸಹಾಯದಿಂದ ಆರೋಪಿಯ ಬೆನ್ನತ್ತಿದರು. ಪೊಲೀಸರ ಹಾದಿ ತಪ್ಪಿಸಲು ಕಮಲ್ ಸಿಂಗ್, ಮೊದಲು ಗೋರಖ್‌ಪುರಕ್ಕೆ ತೆರಳಿ ಮೊಬೈಲ್ ಆನ್ ಮಾಡಿದ್ದ. ತಾನು ನೇಪಾಳದತ್ತ ಹೊರಟ್ಟಿದ್ದೇನೆ ಎಂದು ಖಾಕಿ ಭಾವಿಸಲಿ ಎಂಬುದು ಆತನ ಪ್ಲ್ಯಾನ್ ಆಗಿತ್ತು. ಬಳಿಕ, ಅಲ್ಲಿಗೆ ಹೋಗದೆ, ಮೊಬೈಲ್ ಸ್ವಿಚ್ ಆಫ್ ಮಾಡಿ ಮಥುರಾದಲ್ಲೇ ಉಳಿದುಕೊಂಡಿದ್ದ ಎನ್ನಲಾಗಿದೆ.
ಕಡೆಗೂ ಆತನ ಮಾಸ್ಟರ್ಪ್ಲ್ಯಾನ್ ಅನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, 3 ದಿನಗಳ ಸುದೀರ್ಘ ಹುಡುಕಾಟದ ಬಳಿಕ ಮಥುರಾ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಕಮಲ್ ಸಿಂಗ್‌ನನ್ನು ಬಂಧಿಸಿ, ಕಳ್ಳತನ ಮಾಡಿದ್ದ ಹಣ ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯಲ್ಲಿ, ಎಚ್ಬಿಓ ಚಾನಲ್ನಲ್ಲಿ ಪ್ರಸಾರವಾಗುತ್ತಿದ್ದ 'ದಿ ಸ್ಟೇರ್‌ಕೇಸ್' ವೆಬ್ ಸರಣಿ ನೋಡಿಯೇ ಈ ಕೊಲೆಗೆ ಸಂಚು ರೂಪಿಸಿದ್ದಾಗಿ ಕಮಲ್ ಸಿಂಗ್ ಒಪ್ಪಿಕೊಂಡಿದ್ದಾನೆ,(ಏಜೆನ್ಸೀಸ್).