ನವದೆಹಲಿ: ಫುಟ್ಪಾತ್ ಮೇಲೆ ಮಲಗಿದ್ದ 10 ವರ್ಷದ ಬಾಲಕಿಯೊಬ್ಬಳನ್ನು ಟ್ಯಾಕ್ಸಿ ಚಾಲಕನೊಬ್ಬ ಅಪಹರಿಸಿ,(Delhi Crime) ಅತ್ಯಾಚಾರ ಎಸಗಿ, ಅಮಾನುಷವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ದೆಹಲಿಯ ಮೆಹ್ರೌಲಿಯಲ್ಲಿ ಸೋಮವಾರ (ಜೂ.22) ನಡೆದಿದೆ.
ಘಟನೆ ಏನು
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಸೋಮವಾರ ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಕುಟುಂಬದ ದೂರಿನ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಮೆಹ್ರೌಲಿ ಪೊಲೀಸರು, ಬಾಲಕಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬೃಹತ್ ಶೋಧ ಕಾರ್ಯವನ್ನು ಆರಂಭಿಸಿದರು.
ಘಟನೆ ನಡೆದ ಸುತ್ತಮುತ್ತಲಿನ ಪರಿಸರದಲ್ಲಿ ದೆಹಲಿ ಪೊಲೀಸರು ನೂರಾರು ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದು, ಅದೇ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಟ್ಯಾಕ್ಸಿ ಚಾಲಕನೊಬ್ಬನ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ನಾಲ್ಕೇ ಗಂಟೆಗಳಲ್ಲಿ ಆರೋಪಿಯ ಸೆರೆ
ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು 25 ವರ್ಷದ ಬಬ್ಲು ಎಂದು ಗುರುತಿಸಲಾಗಿದ್ದು ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿ ಹೇಳಿದ್ದೇನು?
ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿ ಬಬ್ಲು ಅಪರಾಧವನ್ನು ಮೆಹ್ರೌಲಿ ಪ್ರದೇಶದ ಸಿಡಿಆರ್ ಚೌಕ್ (CDR Chowk) ಬಳಿಯ ಫುಟ್‌ಪಾತ್‌ನಿಂದ ಬಾಲಕಿಯನ್ನು ಅಪಹರಿಸಿ ಅಲ್ಲಿಂದ ಆಕೆಯನ್ನು ತನ್ನ ಕಾರಿನಲ್ಲಿ ಗುರುಗ್ರಾಮದ ಕಡೆಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ತದನಂತರ ಬಾಲಕಿಯನ್ನು ಕಣ್ಮರೆ ಮಾಡುವ ಸಲುವಾಗಿ ಆಕೆಯ ಶವವನ್ನು ಮೆಹ್ರೌಲಿಯ ಕಾಡಿನಲ್ಲಿ ಎಸೆದಿರುವುದಾಗಿ ತಿಳಿಸಿದ್ದಾರೆ. ಆದಾಗ್ಯೂ, ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆಯೇ ಪೊಲೀಸರು ಅರಣ್ಯ ಪ್ರದೇಶದಿಂದ ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ (ಏಜೆನ್ಸೀಸ್).