Sonam Wangchuk Protest Delhi
- ಜಂತರ್ ಮಂತರ್ ಪ್ರತಿಭಟನೆ ವೇಳೆ ದೆಹಲಿ ಪೊಲೀಸರಿಂದ ಹಲ್ಲೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆರೋಪ
- ಉಪವಾಸ ನಿರತರಾಗಿದ್ದ 60 ವರ್ಷದ ಸೋನಮ್ ವಾಂಗ್ಚುಕ್ರನ್ನು ಪೊಲೀಸರು ಎಳೆದೊಯ್ದಿದ್ದಾರೆ ಎಂದ ದೀಪ್ಕೆ
- ಹೈಕೋರ್ಟ್ ಆದೇಶ ಹಾಗೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದ ಪೊಲೀಸರು
- ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತಿದ್ದೇನೆ ಎಂದ ಅಭಿಜಿತ್ ದಿಪ್ಕೆ
Sonam Wangchuk Protest Delhi: ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರ ಶಿಕ್ಷಣ ಸಚಿವ ಅಭಿಜಿತ್ ದೀಪ್ಕೆ ಅವರ ರಾಜೀನಾಮೆಗಾಗಿ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ಮಧ್ಯೆ ಕಳೆದ 20 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ ಹಾಗೂ ನನಗೆ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಉಪವಾಸ ಆರಂಭಿಸುತ್ತೇನೆ
"ನಾನು ಇದೀಗ ತಕ್ಷಣದಿಂದಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತಿದ್ದೇನೆ. ಎಂದು ಕಾಕ್ರೋಚ್ ಜನತಾ ಪಾರ್ಟಿಯ ಅಭಿಜಿತ್ ದೀಪ್ಕೆ ಅವರ ಮೇಲೆ ಹಲ್ಲೆ ನಡೆಸಿ, ವಶಕ್ಕೆ ಪಡೆದುಕೊಂಡ ನಂತರ ಹೀಗೆಂದು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ
ನನ್ನ ಮೇಲೆ ಹಲ್ಲೆ ನಡೆಸಿ, ದೆಹಲಿ ಪೊಲೀಸರು ನನ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಕ್ಸ್ನಲ್ಲಿ ಅಭಿಜಿತ್ ದೀಪ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ತಂಗಿದ್ದ ಜಾಗದಲ್ಲಿ ನನ್ನನ್ನು ತಡೆದು, ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ಕರೆದೊಯ್ಯಲಾಗಿದೆ. ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
'ನಾನು ಬೆಳಗ್ಗೆ 7 ಗಂಟೆಗೆ ನಾನು ಫ್ರೆಶ್ ಅಪ್ ಆಗಲು ಹೊರಗೆ ಬಂದಾಗ ಪೊಲೀಸರು ಇಲ್ಲಿಗೆ ಬಂದರು. ಅವರು ಸೋನಮ್ ಸರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಲವಂತವಾಗಿ ಎಳೆದೊಯ್ದರು. ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಾ, ಏನನ್ನೂ ಸೇವಿಸದ 60 ವರ್ಷದ ವೃದ್ಧನನ್ನು ದೆಹಲಿ ಪೊಲೀಸರು ಅತ್ಯಂತ ಕ್ರೂರವಾಗಿ ಎಳೆದೊಯ್ದಿದ್ದಾರೆ ಎಂದು ಎಕ್ಸ್ನಲ್ಲಿ ಬರೆದುಕೊಂಡು ಅಭಿಜಿತ್ ದೀಪ್ಕೆ ಅವರು ಕಿಡಿಕಾರಿದ್ದಾರೆ.
ಸೋನಮ್ ವಾಂಗ್‌ಚುಕ್ ಆಸ್ಪತ್ರೆಗೆ ದಾಖಲು
ಇದೇ ವೇಳೆ, ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸರು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದೆಹಲಿ ಪೊಲೀಸರ ಅಧಿಕೃತ ಸ್ಪಷ್ಟನೆ
ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿರುವ ಕುರಿತು ದೆಹಲಿ ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, "ಗೌರವಾನ್ವಿತ ಹೈಕೋರ್ಟ್ ಆದೇಶದ ಪ್ರಕಾರ ಮತ್ತು ತಜ್ಞ ವೈದ್ಯರ ಸಲಹೆಯ ಮೇರೆಗೆ, ಹವಾಮಾನ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ" ಎಂದು ತಿಳಿಸಿದ್ದಾರೆ.
"ದೆಹಲಿ ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸುವಾಗ, ಪ್ರತಿಭಟನಾಕಾರರು ಅಡ್ಡಿಪಡಿಸಲು ಯತ್ನಿಸಿದರು. ಈ ವೇಳೆ ಸಣ್ಣ ಪ್ರಮಾಣದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆದಾಗ್ಯೂ, ಪೊಲೀಸರು ಗರಿಷ್ಠ ಸಂಯಮವನ್ನು ಕಾಯ್ದುಕೊಂಡು ಸುರಕ್ಷಿತವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ" ಎಂದಿದ್ದಾರೆ. ಹೈಕೋರ್ಟ್ ಆದೇಶ ಹಾಗೂ ವಾಂಗ್‌ಚುಕ್ ಅವರ ಆರೋಗ್ಯದ ಹಿತದೃಷ್ಟಿಯಿಂದಲೇ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರತಿಭಟನಾ ಸ್ಥಳದಲ್ಲಿ ಪದೇ ಪದೇ ಅನೌನ್ಸ್ಮೆಂಟ್ ಮೂಲಕ ಜಾಗೃತಿ ಮೂಡಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ, (ಏಜೆನ್ಸೀಸ್).