- ಜಂತರ್ ಮಂತರ್ ಹಿಂಸಾಚಾರದ ಪ್ರತಿಭಟನೆಯಲ್ಲಿ 2,800ಕ್ಕೂ ಹೆಚ್ಚು ರೌಡಿಶೀಟರ್‌ಗಳು ಭಾಗಿ
- ದೆಹಲಿ ಪ್ರತಿಭಟನೆಯಲ್ಲಿ 980ಕ್ಕೂ ಹೆಚ್ಚು ಗಂಭೀರ ಅಪರಾಧಿಗಳು ಪ್ರತ್ಯಕ್ಷ
- 200 ಪೊಲೀಸರಿಗೆ ಗಾಯ, ವಾಹನಗಳಿಗೆ ಬೆಂಕಿ ಹಚ್ಚಿದ್ದ ವಿಡಿಯೋಗಳು ಲಭ್ಯ
- ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದಿಂದ ಬಯಲಾಯ್ತು ಅಸಲಿ ಮುಖಗಳು
ನವದೆಹಲಿ: ಕಳೆದ ವಾರ ದೆಹಲಿಯ ಹೈಸೆಕ್ಯುರಿಟಿ ವಲಯ ಎಂದೇ ಖ್ಯಾತಿ ಪಡೆದಿರುವ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಇದೀಗ ದೆಹಲಿ ಪೊಲೀಸರು ನೂರಾರು ಗಿಗಾಬೈಟ್ (GB) ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿ, ಶಾಕಿಂಗ್ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಮುಂದಾಳತ್ವದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯು ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು ಬಹುತೇಕರಿಗೆ ಗೊತ್ತೇ ಇದೆ. ಹೋರಾಟದಲ್ಲಿ ಪೊಲೀಸರು ಮತ್ತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಜೆಪಿ ಕಾರ್ಯಕರ್ತರು, ವಿದ್ಯಾರ್ಥಿಗಳ ನಡುವೆ ತೀವ್ರ ವಾಗ್ವಾದಗಳು ನಡೆದಿದ್ದು, ಲಾಠಿಚಾರ್ಜ್ ದೊಡ್ಡ ಘರ್ಷಣೆಗೆ ಕಾರಣವಾಯಿತು.
ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಜೆಪಿ ಸರ್ಕಾರಕ್ಕೆ ಬೇಡಿಕೆಯಿಟ್ಟ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ಮುನ್ನೆಲೆಗೆ ಬಂದಿದೆ. ಫೇಶಿಯಲ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನ ಹಾಗೂ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 2,873 ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಪೊಲೀಸರು ಗುರುತಿಸಿದ್ದಾರೆ.
ಗಂಭೀರ ಪ್ರಕರಣಗಳು
ಪೊಲೀಸ್ ಮೂಲಗಳ ಪ್ರಕಾರ, ಗುರುತಿಸಲಾದ ಅಪರಾಧಿಗಳಲ್ಲಿ 989 ಜನರು ಕೊಲೆ, ಅತ್ಯಾಚಾರ, ಅಪಹರಣ, ದರೋಡೆ ಮತ್ತು ಪೋಕ್ಸೋ (POCSO) ಕಾಯ್ದೆಯಡಿ ದಾಖಲಾಗಿರುವ ಗಂಭೀರ ಪ್ರಕರಣಗಳ ಇತಿಹಾಸ ಹೊಂದಿರುವ ಹಳೆ ಆರೋಪಿಗಳು ಎಂಬುದು ಸ್ಪಷ್ಟವಾಗಿದೆ.
- ಕೊಲೆ ಪ್ರಕರಣ: ಒಟ್ಟು 101 ಜನರು (ಇವರಲ್ಲಿ 42 ಜನರ ಮೇಲೆ ಎರಡಕ್ಕಿಂತ ಹೆಚ್ಚು ಮತ್ತು 12 ಜನರ ಮೇಲೆ 10ಕ್ಕಿಂತ ಹೆಚ್ಚು ಕೇಸ್ಗಳಿವೆ)
- ಕೊಲೆ ಯತ್ನ: 62 ಮಂದಿ
- ದರೋಡೆ: 284
- ಅತ್ಯಾಚಾರ: 61 (8 ಜನರ ಮೇಲೆ ಒಂದಕ್ಕಿಂತ ಹೆಚ್ಚು ಕೇಸ್)
- ಪೋಕ್ಸೋ (POCSO) ಪ್ರಕರಣ: 6
- ಲೈಂಗಿಕ ದೌರ್ಜನ್ಯ: 25 ಮಂದಿ
- ಅಸ್ತ್ರ ಕಾಯ್ದೆ (Arms Act): 229
- ಕಿಡ್ನ್ಯಾಪ್: 19
ಸಿಸಿಟಿವಿಯಲ್ಲಿ ಹಿಂಸಾಚಾರದ ದೃಶ್ಯಗಳು ಸೆರೆ
ಜುಲೈ 20, 22ರಂದು ಸಂಸದ್ ಹಾಗೂ ಟಾಲ್ಸ್‌ಟಾಯ್ ಮಾರ್ಗ ಮತ್ತು ಜಂತರ್ ಮಂತರ್ ಸುತ್ತಮುತ್ತ ನಡೆದ ಹಿಂಸಾಚಾರದ 100ಕ್ಕೂ ಹೆಚ್ಚು ವಿಡಿಯೋ ತುಣುಕುಗಳು ಪೊಲೀಸರಿಗೆ ಈಗ ಲಭ್ಯವಾಗಿವೆ. ಹೋರಾಟ ನೆಪದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ನುಗ್ಗಿದ ಪ್ರತಿಭಟನಾಕಾರರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಪೆಪ್ಪರ್ ಸ್ಪ್ರೇ ಬಳಸಿದ್ದಾರೆ. ಸಂಸದ್ ಮಾರ್ಗದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಸುತ್ತುವರಿದು ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂದು ವಿವರಿಸಲಾಗಿದೆ.
ಆಸ್ತಿಪಾಸ್ತಿ ನಾಶ
ಪೋಲಿಸ್ ವಾಹನಗಳನ್ನು ಮಗುಚಲು ಯತ್ನಿಸುವುದು, ವಾಹನಗಳಿಗೆ ಬೆಂಕಿ ಹಚ್ಚುವುದು, ಬಸ್ ಟೈರ್‌ಗಳನ್ನು ಪಂಕ್ಚರ್ ಮಾಡುವುದು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಅಂಗಡಿಗಳನ್ನು ಧ್ವಂಸಗೊಳಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಹಿಂಸಾಚಾರದ ಪ್ರತಿಭಟನೆಯಲ್ಲಿ, 200ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಸಮವಸ್ತ್ರದ ಮೇಲೆ ರಕ್ತ ಹರಿಯುತ್ತಿದ್ದರೂ ಸಹೋದ್ಯೋಗಿಗಳನ್ನು ರಕ್ಷಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ ಎನ್ನಲಾಗಿದೆ.
ಪ್ರಧಾನಿ ವಿರುದ್ಧ ನಿಂದನೆ!
ಹಿಂಸಾಚಾರದ ಜತೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾನಾಟ್ ಪ್ಲೇಸ್‌ನಲ್ಲಿ ಮಹಿಳೆಯೊಬ್ಬಳು ಮಾಡಿದ ನಿಂದನೀಯ ಹೇಳಿಕೆಗಳು, ಸಂಸತ್ತಿನ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳು ಹಾಗೂ ಪೊಲೀಸರ ವಿರುದ್ಧ ಕೆಟ್ಟ ಪದಗಳ ಬಳಕೆ ಮಾಡಿರುವ ವಿಡಿಯೋಗಳನ್ನು ಪೊಲೀಸರು ಸಂಗ್ರಹಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು 'ಎನ್ಡಿಟಿವಿ ವರದಿ' ಮಾಡಿದೆ,(ಏಜೆನ್ಸೀಸ್).