ದೆಹಲಿ ಸತ್ಯ ನಿಕೇತನ ಪಿಜಿ ಕಟ್ಟಡ ಕುಸಿತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 
ದೇಶ

ದೆಹಲಿ PG ಕಟ್ಟಡ ಕುಸಿತ: 7 ಮಂದಿ ಸಾವು; ಮಾಲೀಕ, ಪತ್ನಿ-ಮಗ ಅರೆಸ್ಟ್‌, 5 MCD ಅಧಿಕಾರಿಗಳು ಸಸ್ಪೆಂಡ್! Delhi PG Building Collapse

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸಮೀಪದಲ್ಲಿರುವ ಸತ್ಯ ನಿಕೇತನ್​ ಪಿಜಿ ಕಟ್ಟಡ ಕುಸಿತ (Delhi PG Building Collapse) ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರಾದ ಹರಿರಾಮ್​ ಗುಪ್ತಾ, ಮಗ ಮಹೇಶ್​ ಹಾಗೂ ಪತ್ನಿ ಊರ್ಮಿಳಾರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.
ನಿನ್ನೆ (ಸೆ.6) ಐದಂಸ್ತಿನ ಈ ಪಿಜಿ ಕುಸಿತ ಕಂಡಿದ್ದು ಇಲ್ಲಿವರೆಗೆ ಸುಮಾರು 7 ಜನ ಸಾವನ್ನಪ್ಪಿದ್ದು, ಇನ್ನು ಕೆಲವರು ಅವಶೇಷಗಳ ಅಡಿಯಲ್ಲಿದ್ದಾರೆಂದು ಹೇಳಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಹೈಕೋರ್ಟ್​ ತರಾಟೆ!

ಈ ಪ್ರಕರಣದ ಕುರಿತು ದಾಖಲಾಗಿರುವ ಅರ್ಜಿ ವಿಚಾರಣೆ ನಡೆಸಿದ ದೇವೇಂದ್ರ ಕುಮಾರ್​ ಉಪಾಧ್ಯಯ ಮತ್ತು ತೇಜಸ್​ ಕರಿಯ ಅವರ ನ್ಯಾಯಪೀಠ, ರಾಷ್ಟ್ರ ರಾಜಧಾನಿಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ರಾಜ್ಯ ಸರ್ಕಾರ, ಪಾಲಿಕೆ ಹಾಗೂ ದೆಹಲಿ ವಿಶ್ವವಿದ್ಯಾಲಯಕ್ಕೆ ತರಾಟೆಗೆ ತೆಗೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂರು ಸಂಸ್ಥೆಗಳು ಪ್ರತ್ಯೇಕ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. 
ಐದು ಅಧಿಕಾರಿಗಳು ಅಮಾನತು!
ಈ ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ದೆಹಲಿ ಮಹಾನಗರ ಪಾಲಿಕೆ, ತಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಈ ಘಟನೆಗೆ ಪರೋಕ್ಷವಾಗಿ ಕಾರಣರಾದ ಐವರನ್ನು ಅಧಿಕಾರದಿಂದ ವಜಾ ಮಾಡಿ ಆದೇಶಿಸಿದೆ. ಅಮಾನತುಗೊಂಡ ಅಧಿಕಾರಿಗಳಲ್ಲಿ ಉಪ ಆಯುಕ್ತರು, ಕಾರ್ಯನಿರ್ವಾಹಕ ಎಂಜಿನಿಯರ್, ಸೂಪರಿಂಟೆಂಡಿಂಗ್ ಎಂಜಿನಿಯರ್, ಸಹಾಯಕ ಎಂಜಿನಿಯರ್ ಮತ್ತು ಜೂನಿಯರ್ ಎಂಜಿನಿಯರ್ ಸೇರಿದಂತೆ ದೆಹಲಿ ಮಹಾನಗರ ಪಾಲಿಕೆಯ (MCD) ವಿವಿಧ ಹಂತಗಳ ಸಿಬ್ಬಂದಿ ಸೇರಿದ್ದಾರೆ.
ಅಮಾನತುಗೊಂಡ ಐವರು ಅಧಿಕಾರಿಗಳು: ರಾಕೇಶ್ ಕುಮಾರ್ (ಉಪ ಆಯುಕ್ತರು, ದಕ್ಷಿಣ ವಲಯ), ರಣವೀರ್ ಸಿಂಗ್ (ಸೂಪರಿಂಟೆಂಡಿಂಗ್ ಎಂಜಿನಿಯರ್, ದಕ್ಷಿಣ ವಲಯ), ಲಲಿತ್ ಕುಮಾರ್ ಗೋಯಲ್ (ಕಾರ್ಯನಿರ್ವಾಹಕ ಎಂಜಿನಿಯರ್, ದಕ್ಷಿಣ ವಲಯ), ಸುನಿಲ್ ಚೌಹಾಣ್ (ಸಹಾಯಕ ಎಂಜಿನಿಯರ್, ದಕ್ಷಿಣ ವಲಯ) ಮತ್ತು ಆಶಿಶ್ ಕುಮಾರ್ (ಜೂನಿಯರ್ ಎಂಜಿನಿಯರ್), (ಏಜನ್ಸೀಸ್​).