Delhi model murder Prime accused Imran arrested after encounte
- ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ 21 ವರ್ಷದ ಮುಸ್ಕಾನ್ ಭೀಕರ ಹತ್ಯೆ.
- ಮೂರು ರಾಜ್ಯಗಳಲ್ಲಿ ಶೋಧ ನಡೆಸಿ ಪ್ರಮುಖ ಆರೋಪಿ ಇಮ್ರಾನ್ ಅಲಿಯಾಸ್ ಆಕಿಬ್ ಬಂಧನ.
- ಪೊಲೀಸರ ಗುಂಡೇಟಿಗೆ ಗಾಯಗೊಂಡ ಇಮ್ರಾನ್ ಅಲಿಯಾಸ್ ಆಕಿಬ್ ಆಸ್ಪತ್ರೆಗೆ ದಾಖಲು.
ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ 21 ವರ್ಷದ ಮಾಡೆಲ್ ಮುಸ್ಕಾನ್ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂರು ರಾಜ್ಯಗಳಲ್ಲಿ ವ್ಯಾಪಕ ಶೋಧ ನಡೆಸಿ ಕೊನೆಗೂ ಪ್ರಮುಖ ಆರೋಪಿ ಇಮ್ರಾನ್ ಅಲಿಯಾಸ್ ಆಕಿಬ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಇಮ್ರಾನ್ನ ಬಂಧಿಸುವ ಸಮಯದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕಾಲಿಗೆ ಗುಂಡೇಟು ತಗುಲಿದೆ. ಈ ಹಿನ್ನೆಲೆ, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಈತ 2021ರ ಹಲ್ಲೆ ಮತ್ತು ಕೊಲೆ ಆರೋಪ ಪ್ರಕರಣದಲ್ಲಿ ಇಮ್ರಾನ್ ಭಾಗಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಯಾರು ಈ ಇಮ್ರಾನ್, ಆಗಿದ್ದೇನು?
ಜಿಮ್‌ನಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಇಮ್ರಾನ್ ಮತ್ತು ಜಿಮ್‌ಗೆ ವರ್ಕೌಟ್ ಮಾಡಲು ಬರುತ್ತಿದ್ದ ಮುಸ್ಕಾನ್ ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪರಿಚಿತರಾಗಿದ್ದರು. ಇಬ್ಬರೂ ಒಂದೇ ಜಿಮ್‌ಗೆ ಭೇಟಿ ನೀಡುತ್ತಿದ್ದರು. ಮುಸ್ಕಾನ್ ಕುಟುಂಬದವರ ಪ್ರಕಾರ ಇಮ್ರಾನ್ ಆಕೆಯನ್ನು ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದನು ಎಂಬುದಾಗಿ ಜುಲೈನಲ್ಲಿ ಆಕೆಯ ಕುಟುಂಬಸ್ಥರು ದೂರು ನೀಡಿದ್ದರು ಎನ್ನಲಾಗಿದೆ. ಇನ್ನು ಮುಸ್ಕಾನ್ ಬೇರೋಬ್ಬನ ಜೊತೆಗೆ ಕ್ಲೋಸ್ ಆಗಿ ಮೆಸೇಜ್ ಮಾಡುತ್ತಿದ್ದಾಳೆ ಎನ್ನುವ ಶಂಕೆಯಿಂದ ಆಕೆಗೆ ಚಾಕುವಿನಿಂದ ಇರಿದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹತ್ಯೆಯ ದಿನ ನಡೆದಿದ್ದೇನು?
ಬುಧವಾರ ಮುಸ್ಕಾನ್ ಅವರ ಸಹೋದರಿಯರು ಚಂಡೀಗಢಕ್ಕೆ ತೆರಳಿದ್ದರು. ತಾಯಿ ದಿನಸಿ ಸಾಮಗ್ರಿಗಳನ್ನು ತರಲು ಹೊರಗೆ ಹೋಗಿದ್ದಾಗ ಮುಸ್ಕಾನ್ ಮನೆಯಲ್ಲಿ ಒಂಟಿಯಾಗಿದ್ದರು. ಸಂಜೆ 5:40ರ ಸುಮಾರಿಗೆ ಪರಿಚಯಸ್ಥನಂತೆ ಮನೆಗೆ ಬಂದ ಇಮ್ರಾನ್ ಜತೆ ವಾಗ್ವಾದ ನಡೆದಿದೆ. ಈ ವೇಳೆ ಆತ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಮುಸ್ಕಾನ್ ಹೊಟ್ಟೆಗೆ ಮೂರು ಬಾರಿ ಇರಿದು, ನಂತರ ಕುತ್ತಿಗೆ ಹಿಸುಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯದ ಬಳಿಕ ಸುಮಾರು 25 ನಿಮಿಷಗಳ ಕಾಲ ಮನೆಯಲ್ಲೇ ಇದ್ದ ಆರೋಪಿ, ಸಂಜೆ 6:05ರ ಸುಮಾರಿಗೆ ಮುಸ್ಕಾನ್ ಅವರ ಮೊಬೈಲ್ ಫೋನ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ನಂತರ ಪೊಲೀಸರು ಈ ಮೊಬೈಲ್ ಅನ್ನು ರಸ್ತೆ ಬದಿಯಿಂದ ವಶಪಡಿಸಿಕೊಂಡಿದ್ದಾರೆ.
ಮನೆಯ ಕೆಲಸದಾಳು ಒಳಗೆ ಬಂದಾಗ ಮುಸ್ಕಾನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರು ರಕ್ತಸ್ರಾವ ತಡೆಯಲು ಬಟ್ಟೆಗಳನ್ನು ಇಟ್ಟು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ನಡುವೆ ಸ್ನೇಹಿತ ಅಮಾನ್ ಅವರಿಗೆ ಮುಸ್ಕಾನ್ ಸಹೋದರಿಯಿಂದ ಮಾಹಿತಿ ಸಿಕ್ಕಿದ್ದು, ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಮುಸ್ಕಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಮಾದಕ ವ್ಯಸನಿ ಇಮ್ರಾನ್?
ಇಮ್ರಾನ್ ಡ್ರಗ್ ಅಡಿಕ್ಟ್ ಆಗಿದ್ದ ಎನ್ನುವ ಸಂಶಯ ವ್ಯಕ್ತವಾಗಿದೆ. ಜುಲೈನಲ್ಲಿ ಕುಟುಂಬದ ದೂರಿನ ಮೇರೆಗೆ ಆತನನ್ನು ಡ್ರಗ್ಸ್ ವ್ಯಸನ ಮುಕ್ತ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಕಿರುಕುಳ ಮುಂದುವರೆದಿತ್ತು. ಎರಡು ತಿಂಗಳ ಹಿಂದೆ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಆತನನ್ನು ಜಿಮ್‌ನಿಂದ ಕೆಲಸದಿಂದ ತೆಗೆದುಹಾಕಲಾಗಿತ್ತು. ಹತ್ಯೆಗೆ ಕೆಲವು ದಿನಗಳ ಮೊದಲು ಅಂದರೆ ಆಗಸ್ಟ್ 20ರಂದು ಇಮ್ರಾನ್ ಮತ್ತು ಮುಸ್ಕಾನ್ ಹೋಟೆಲ್‌ನಲ್ಲಿ ಭೇಟಿಯಾಗಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ, (ಏಜೆನ್ಸೀಸ್).