Delhi hotel fire Malviya Nagar 
ದೇಶ

Delhi Hotel Fire: 'ಬೆಂಕಿ ಹಬ್ಬಿದ್ದನ್ನು ಕಣ್ಣಾರೆ ಕಂಡೆ ಭಯದಿಂದ ಅಲ್ಲಿಂದ ಕಾಲ್ಕಿತ್ತೆ'; ಪೊಲೀಸರ ವಿಚಾರಣೆ ವೇಳೆ​ ಮಾಲೀಕ ಬಾಯ್ಬಿಟ್ಟಿದ್ದು ಹೀಗೆ!

ನವದೆಹಲಿ: ಇಲ್ಲಿನ ಮಾಳವೀಯ ನಗರದ ಸಮೀಪವಿರುವ ಫ್ಲರಿಶ್​ ಬೆಡ್​ ಅಂಡ್ ಬ್ರೇಕ್​ಫಾಸ್ಟ್​ ಹೋಟೆಲ್​​ನಲ್ಲಿ  ಬೆಂಕಿ ಕಾಣಿಸಿಕೊಂಡು, 21 ಮಂದಿ ಸಜೀವ ದಹನಗೊಂಡ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ಲವಕೇಶ್ ಬಜಾಜ್​​ನನ್ನು ಪೊಲೀಸರು ಬಂಧಿಸಿದ್ದಾರೆ.
ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್​ಗೆ ಮುಂಜಾನೆ 8:50ಕ್ಕೆ ಹೋಟೆಲ್​ನ ನೆಲ ಮಾಳಿಗೆಗೆ ಬೆಂಕಿ ಹೊತ್ತಿಕೊಂಡಿದನ್ನು ಮಾಲೀಕ ಲವಕೇಶ್​ ಗಮನಿಸಿದ್ದರು. ಆದರೆ, ಸಿಕ್ಕಿಬೀಳುವ ಭಯದಿಂದ ಯಾರಿಗೂ ಈ ಬಗ್ಗೆ ಮಾಹಿತಿ ನೀಡದೆ, ಸಂತ್ರಸ್ತರನ್ನು ರಕ್ಷಿಸಲು ಹೋಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ, 

ವಿಚಾರಣೆ ವೇಳೆ ಲವಕೇಶ್​ ಹೇಳಿದ್ದು ಹೀಗೆ..

ನಾನು ಹೋಟೆಲ್​ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದೆ. ಆದರೆ ನನಗೆ ಭಯವಾಯ್ತು ಹೀಗಾಗಿ ನನ್ನ ಕಾರನ್ನು ತೆಗೆದುಕೊಂಡು ಅಲ್ಲಿಂದ ಹೊರಟುಬಿಟ್ಟೆ. ಮನೆಗೆ ಹೋಗಲು ಹೆದರಿಕೆಯಾಯ್ತು ಹೀಗಾಗಿ ಸುಮ್ಮನೆ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ
2022ರಲ್ಲಿ ಅಹ್ಲುವಾಲಿಯಾ ಎಂಬುವವರಿಂದ ಲವಕೇಶ್​ ಅವರು ಹೋಟೆಲ್​​ನನ್ನು ಸ್ವಾದೀನ ಪಡಿಸಿಕೊಂಡರು ಎನ್ನಲಾಗಿದೆ. ಹೋಟೆಲ್​ ಕಮ್​ ಅತಿಥಿಗೃಹವಾಗಿರುವ ಈ ಕಟ್ಟಡದ ಹಿಂದೆ ಖಾದಿ ಅಂಗಡಿ ಇತ್ತು. ಖರೀದಿ ಮಾಡುವ ಸಮಯದಲ್ಲಿ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು ಎಂದು ಹೇಳಿದ್ದಾರೆ.

ನಿಯಮ ಉಲ್ಲಂಘನೆ, ಕಿಟಕಿಗಳಿಲ್ಲ

ಫ್ಲರಿಶ್​ ಬೆಡ್​ ಅಂಡ್ ಬ್ರೇಕ್​ಫಾಸ್ಟ್​ ಹೋಟೆಲ್​​ಗೆ  ದೆಹಲಿ ಸರ್ಕಾರವು ನಿಯಮಾವಳಿಯಡಿ ಕೇವಲ 6 ಕೋಣೆಗಳನ್ನು ನಡೆಸಲು ಅನುಮತಿ ನೀಡಿತ್ತು. ಆದರೆ ನೆಲಮಾಳಿಗೆ ಸೇರಿ ಬರೋಬ್ಬರಿ 25 ಕೋಣೆಗಳನ್ನು ಇಲ್ಲಿ ನಡೆಸಲಾಗುತ್ತಿತ್ತು. ಜೊತೆಗೆ  ಅಗ್ನಿ ಶಾಮಕ ಇಲಾಖೆಯ ಪ್ರಾಥಮಿಕ ತನಿಖೆಯ ಪ್ರಕಾರ, ಹೋಟೆಲ್​ಗೆ ಯಾವುದೇ ಮಾನ್ಯತೆ ಇರುವ ನಿರಾಕ್ಷೇಪಣಾ ಪತ್ರ ಇರಲಿಲ್ಲ. ಇಡೀ ಕಟ್ಟಡಕ್ಕೆ ಯಾವುದೇ ಕಿಟಕಿಗಳಿರಲಿಲ್ಲ ಮತ್ತು ಒಂದೇ ಪ್ರವೇಶ ಹಾಗೂ ನಿರ್ಗಮನ ದ್ವಾರವಿತ್ತು ಎನ್ನಲಾಗಿದೆ.

ಮಾಲೀಕ ಒಬ್ಬ, ಪರವಾನಗಿ ಮತ್ತೊಬ್ಬನ ಹೆಸರಲ್ಲಿ

ಲವಕೇಶ್​  ಬಿ ಆಂಡ್​ ಬಿ ಹೋಟೆಲ್​ ಮಾಲೀಕ. ಆದರೆ, ಹೋಟೆಲ್​​ನ ನಿರ್ವಹಣೆಯನ್ನು  ಜೈ ಮಿಶ್ರಾ ಎಂಬಾತನಿಗೆ ವಹಿಸಿಕೊಟ್ಟಿದ್ದನು.  ಪರವಾನಗಿಯೂ ಅವರ ಹೆಸರಲ್ಲಿಯೆ ಇದೆ  ಎನ್ನಲಾಗಿದೆ. ಈ ಕಾರಣದಿಂದ ಆತ ಯಾರು, ಎಲ್ಲಿದ್ದಾನೆ, ಈತನ ಹೆಸರಲ್ಲಿ ಪರವಾನಗಿ ಇರೋದ್ಯಾಕೆ ಎನ್ನುವ ಶೋಧ ಕಾರ್ಯಕ್ಕೆ ಮುಂದಾಗಿದ್ದೇವೆ' ಎಂದಿದ್ದಾರೆ.

ಕೋರ್ಟ್​ ಮುಂದೆ ಹಾಜರು

ಸದ್ಯ ಪೊಲೀಸರು ಹೋಟೆಲ್​ ಮಾಲೀಕರನ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡಿದ್ದು, ಇಂದು(ಜೂ.4)ರ ಮಧ್ಯಾಹ್ನ ಸುಮಾರು 2 ಗಂಟೆಗೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಐದು ದಿನಗಳ ಕಾಲ ಪೊಲೀಸ್​​ ಕಸ್ಟಡಿಗೆ ಕೋರುವ ಸಾಧ್ಯತೆ ಇದೆ.
ಇಡೀ ಕಟ್ಟಡಕ್ಕೆ ಯಾವುದೇ ಕಿಟಕಿಗಳಿರಲಿಲ್ಲ ಮತ್ತು ಒಂದೇ ಪ್ರವೇಶ ಹಾಗೂ ನಿರ್ಗಮನ ದ್ವಾರವಿತ್ತು. ಇದೇ ಕಾರಣಕ್ಕೆ ಬೆಂಕಿ ತಕ್ಷಣವೇ ಇಡೀ ಕಟ್ಟಡಕ್ಕೆ ಅತ್ಯಂತ ವೇಗವಾಗಿ ವ್ಯಾಪಿಸಿತು ಎಂದು ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಎ.ಕೆ. ಮಲಿಕ್ ಹೇಳಿದ್ದಾರೆ. ನೆಲಮಾಳಿಗೆಯನ್ನು ಶಟರ್ ಹಾಕಿ ಮುಚ್ಚಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಆ ಕಬ್ಬಿಣದ ಶಟರ್ ಕತ್ತರಿಸಿ ಒಳಗೆ ಹೋದಾಗ, ಅಲ್ಲಿ ಆರು ಜನ ಸಿಲುಕಿರುವುದು ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ, (ಏಜೆನ್ಸೀಸ್).