ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಹಿನ್ನಲೆಯಲ್ಲಿ ದೆಹಲಿಯನ್ನು "ಗ್ಯಾಸ್ ಚೇಂಬರ್" ಎಂದು ಕರೆದಿರುವ ಡಿಎಂಕೆ ರಾಜ್ಯಸಭಾ ಸಂಸದ ಪಿ ವಿಲ್ಸನ್, ಹೊಗೆಯ ದಟ್ಟಣೆ ಹೆಚ್ಚಾಗುತ್ತಿರುವ ಈ ತಿಂಗಳುಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನಡೆಸುವ ಬಗ್ಗೆ ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2024 ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆಯನ್ನು ಮಣಿಪುರಕ್ಕೂ ವಿಸ್ತರಿಸುವ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅವರು, ಮಾಲಿನ್ಯವು ಇನ್ನು ಮುಂದೆ ಕಾನೂನುಬದ್ಧ ಕಾಳಜಿ ಅಲ್ಲ, ರಾಷ್ಟ್ರೀಯ ತುರ್ತುಸ್ಥಿತಿ ಎಂದು ಹೇಳಿದರು.
2025 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ವಾಯು ಗುಣಮಟ್ಟದ ಮಾನದಂಡಗಳಿಗೆ ಹೊಂದಿಕೆಯಾಗುವ ಒಂದೇ ಒಂದು ದಿನವೂ ದೆಹಲಿಯಲ್ಲಿ ಕಂಡುಬಂದಿಲ್ಲ ಎಂದ ವಿಲ್ಸನ್, ಮಾಲಿನ್ಯದಿಂದಾಗಿ ನಿವಾಸಿಗಳು ತಮ್ಮ ಆಯುಕ್ಷ್ಯದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಜೀವಿತಾವಧಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು. ರಾಜಧಾನಿಯ ಈ ವಿಷಕಾರಿ ಗಾಳಿಗೆ ನೆರೆಯ ರಾಜ್ಯಗಳಲ್ಲಿ ಕೂಳೆ ಸುಡುವುದೊಂದೇ ಕಾರಣವಲ್ಲ ಎಂದಿದ್ದು, ವಾಹನಗಳ ಹೊರಸೂಸುವ ಹೊಗೆಯೇ ಇದಕ್ಕೆ ದೊಡ್ಡ ಕಾರಣ ಎಂದು ತಿಳಿಸಿದರು.
ಎಲ್ಲಾ ಸರ್ಕಾರಿ ಕೆಲಸಗಳು ದೆಹಲಿಯಿಂದಲೇ ಏಕೆ ಮುಂದುವರಿಯಬೇಕು ಎಂದು ಪ್ರಶ್ನಿಸಿರುವ ಡಿಎಂಕೆ ಸಂಸದರು, 2025 ರಲ್ಲಿ ಸರ್ಕಾರವು 1950 ರಲ್ಲಿ ಮಾಡಿದ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ. ರಾಜಧಾನಿಯ ಮೇಲಿನ ಆಡಳಿತಾತ್ಮಕ ಹೊರೆ ಕಡಿಮೆ ಮಾಡಲು ವಿವಿಧ ಸಚಿವಾಲಯಗಳು ಮತ್ತು ಶಾಸನಬದ್ಧ ಸಂಸ್ಥೆಗಳನ್ನು ಇತರ ರಾಜ್ಯಗಳಿಗೆ ಸ್ಥಳಾಂತರಿಸಬೇಕು. ದೇಶಾದ್ಯಂತ ಆಡಳಿತಾತ್ಮಕ ಹೊರೆಯನ್ನು ಹರಡಿ, ದೆಹಲಿಯ ಜನದಟ್ಟಣೆಯನ್ನು ಕಡಿಮೆ ಮಾಡೋಣ ಮತ್ತು ರಾಷ್ಟ್ರ ರಾಜಧಾನಿ ಜನರು ಉತ್ತಮ ಗಾಳಿಯನ್ನು ಉಸಿರಾಡಲು ಅವಕಾಶ ನೀಡೋಣ ಸಲಹೆ ನೀಡಿದರು.
ವರ್ಷದ ಅತ್ಯಂತ ಕೆಟ್ಟ ಮಾಲಿನ್ಯದ ಪರಿಸ್ಥಿತಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ವಿಲ್ಸನ್, ಕಡ್ಡಾಯ ಅಧಿವೇಶನಗಳಿಗೆ ಸಾಂವಿಧಾನಿಕ ಅವಶ್ಯಕತೆಗಳನ್ನು ಇತರ ಅಧಿವೇಶನಗಳನ್ನು ಸರಿಹೊಂದಿಸುವ ಮೂಲಕ ಪೂರೈಸಬಹುದು ಎಂದು ಹೇಳಿದರು.
ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥದ ಸುತ್ತಮುತ್ತಲಿನ ಪ್ರದೇಶವು ವಿಷಕಾರಿ ಹೊಗೆಯ ದಟ್ಟವಾದ ಪದರದಿಂದ ಆವೃತವಾಗಿತ್ತು, ಈ ಪ್ರದೇಶದಲ್ಲಿನ ವಾಯು ಗುಣಮಟ್ಟ ಸೂಚ್ಯಂಕ ತುಂಬಾ ಕಳಪೆ ಮಟ್ಟದಲ್ಲಿ 356 ದಾಖಲಾಗಿದೆ. ಅಕ್ಷರಧಾಮ ಪ್ರದೇಶವನ್ನು ವಿಷಕಾರಿ ಹೊಗೆಯ ಪದರದಲ್ಲಿ ತೋರಿಸಲಾಗಿದ್ದು, ಇಲ್ಲಿ ಪ್ರದೇಶದ ಸುತ್ತಲಿನ ವಾಯು ಗುಣಮಟ್ಟ ಸೂಚ್ಯಂಕ 405 ಆಗಿದ್ದು, ಇದನ್ನು ತೀವ್ರ ಎಂದು ಗುರುತಿಸಲಾಗಿದೆ(ಏಜೆನ್ಸೀಸ್).