ನವದೆಹಲಿ: ದೇಶದ ರಾಜಧಾನಿ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ(Delhi Fire Tragedy) ಒಂದೇ ಕುಟುಂಬದ ಒಂಬತ್ತು ಸದಸ್ಯರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಮೂವರು ಚಿಕ್ಕ ಮಕ್ಕಳೂ ಸೇರಿದ್ದು, ಘಟನೆಯು ಇಡೀ ದೆಹಲಿಯನ್ನು ದಿಗ್ಭ್ರಮೆಗೊಳಿಸಿದೆ.
ಪಾಲಂ ಮೆಟ್ರೋ ನಿಲ್ದಾಣದ ಸಮೀಪವಿರುವ ರಾಮ್ ಚೌಕ್ ಮಾರುಕಟ್ಟೆಯ ಐದು ಅಂತಸ್ತಿನ ವಸತಿ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಬುಧವಾರ ಬೆಳಿಗ್ಗೆ ಸುಮಾರು 7:00 ಗಂಟೆಗೆ ಕಟ್ಟಡದ ಕೆಳಮಹಡಿಯಲ್ಲಿದ್ದ ಬಟ್ಟೆ ಮತ್ತು ಸೌಂದರ್ಯವರ್ಧಕ ಶೋರೂಮ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಮೇಲಿನ ಮಹಡಿಗಳಿಗೆ ವ್ಯಾಪಿಸಿದೆ.
ಶೋರೂಮ್ ಮಾಲೀಕ ರಾಜೇಂದ್ರ ಕಶ್ಯಪ್ ಅವರ ಕುಟುಂಬದವರು ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ವಾಸವಿದ್ದರು. ಬೆಳಿಗ್ಗೆ ನಿದ್ರೆಯಲ್ಲಿದ್ದಾಗಲೇ ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸಿಕೊಂಡಿದ್ದರಿಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೀವ ಉಳಿಸಿಕೊಳ್ಳಲು ಇಬ್ಬರು ವ್ಯಕ್ತಿಗಳು ಕಟ್ಟಡದಿಂದ ಕೆಳಕ್ಕೆ ಜಿಗಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರ ವಿವರ
ಈ ದುರಂತದಲ್ಲಿ 70 ವರ್ಷದ ವೃದ್ಧೆ ಲಾಡೋ ಸೇರಿದಂತೆ ಪ್ರವೇಶ್ (33), ಕಮಲ್ (39), ಆಶು (35), ಹಿಮಾಂಶಿ (22), ದೀಪಿಕಾ (28) ಮತ್ತು 15, 6 ಹಾಗೂ 3 ವರ್ಷದ ಮೂವರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಸಚಿನ್ (29) ಎಂಬುವವರು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಶೇ. 25ರಷ್ಟು ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ 30 ಅಗ್ನಿಶಾಮಕ ವಾಹನಗಳು, 11 ಆಂಬ್ಯುಲೆನ್ಸ್‌ಗಳು ಹಾಗೂ ಎನ್‌ಡಿಆರ್‌ಎಫ್ (NDRF), ವಾಯುಪಡೆ ಪೊಲೀಸ್ ಮತ್ತು ಬಿಎಸ್‌ಇಎಸ್ ತಂಡಗಳು ದೌಡಾಯಿಸಿವೆ. ಮಾರುಕಟ್ಟೆಯು ಅತ್ಯಂತ ಇಕ್ಕಟ್ಟಾದ ಪ್ರದೇಶದಲ್ಲಿರುವುದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕಟ್ಟಡದಿಂದ ಹೊರಬರುತ್ತಿದ್ದ ದಟ್ಟವಾದ ಕಪ್ಪು ಹೊಗೆ ಇಡೀ ಪ್ರದೇಶವನ್ನು ಆವರಿಸಿತ್ತು.
ಮೆಜಿಸ್ಟೀರಿಯಲ್ ತನಿಖೆಗೆ ಆದೇಶ
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಘಟನೆಯ ಬಗ್ಗೆ ಸಮಗ್ರ ಮೆಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಫೋರೆನ್ಸಿಕ್ ತಂಡವನ್ನು ಕರೆಯಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ,(ಏಜೆನ್ಸೀಸ್).