ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಹದಗೆಟ್ಟಿರುವ ವಾಯುಮಾಲಿನ್ಯಕ್ಕೆ ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ(Manjinder Singh), ಜನರ ಕ್ಷಮೆ ಕೇಳಿದ್ದು, ಇದು ಆಮ್ ಆದ್ಮಿ ಪಕ್ಷ ನಮಗೆ ನೀಡಿ ಹೋಗಿರುವ ರೋಗ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ(ಡಿ. 16) ದೆಹಲಿಯಲ್ಲಿ ಮಾತನಾಡಿರುವ ಅವರು, ಯಾವುದೇ ಚುನಾಯಿತ ಸರ್ಕಾರವು 9-10 ತಿಂಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವನ್ನು ಕಡಿಮೆ ಮಾಡುವುದು ಅಸಾಧ್ಯ. ಈ ಮಾಲಿನ್ಯದ ರೋಗವನ್ನು ಆಮ್ ಆದ್ಮಿ ಪಕ್ಷವು ನಮಗೆ ನೀಡಿದೆ ಮತ್ತು ಅದನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ. ದೆಹಲಿಯಲ್ಲಿನ ಮಾಲಿನ್ಯಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಎಎಪಿ ಸರ್ಕಾರಕ್ಕಿಂತ ಉತ್ತಮವಾಗಿ ನಮ್ಮ ಸರ್ಕಾರ ವಾಯುಮಾಲಿನ್ಯ ಕಡಿಮೆ ಮಾಡಲು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಸ್ತುತ 381 ರಷ್ಟಿದೆ. ವಾಜಿಪುರವು 434 ರಲ್ಲಿ ಅತ್ಯಧಿಕ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿದೆ, ಜಹಾಂಗೀರ್‌ಪುರಿ 430ರಲ್ಲಿ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ ಆನಂದ್ ವಿಹಾರ್, ಅಶೋಕ್ ವಿಹಾರ್ ಕೂಡ ತೀವ್ರ ವರ್ಗದಲ್ಲಿವೆ.
ವಾಯುಮಾಲಿನ್ಯದ ಬಗ್ಗೆ ಎಎಪಿ ವಾಗ್ದಾಳಿ
ಪ್ರಸ್ತುತ ಇರುವ ವಾಯುಮಾಲಿನ್ಯವು ಎಎಪಿ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಭಾರಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ವಾಯು ಮಾಲಿನ್ಯದ ಬಗ್ಗೆ ಪ್ರಧಾನಿ ಮೋದಿ ಯಾಕೆ ಇನ್ನೂ ಮಾತನಾಡಿಲ್ಲ ಎಂದು ಎಎಪಿ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಚಾಚಿ ಭಾರತಕ್ಕೆ ಅಂತರರಾಷ್ಟ್ರೀಯ ಮುಜುಗರವನ್ನು ತರುತ್ತದೆ. ಸಿಂಗಾಪುರ್ ಹೈಕಮಿಷನ್ ದೆಹಲಿ ಮಾಲಿನ್ಯದ ವಿರುದ್ಧ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).