ನೀಟ್ ಲೀಕ್ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆ ಬೆನ್ನಲ್ಲೇ ಸಿಬಿಐಗೆ ಹೈಕೋರ್ಟ್ ಪ್ರಶ್ನೆ
- ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ
- ಸಿಬಿಐ ಸಲ್ಲಿಸಿರುವ ಸುಮಾರು 20,000 ಪುಟಗಳ ಚಾರ್ಜ್‌ಶೀಟ್
- ಆರೋಪಿಗಳ ಹೆಸರು ಲೀಕ್ ಆಗಿರುವುದಕ್ಕೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ
ನವದೆಹಲಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಸುಮಾರು 20,000 ಪುಟಗಳ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನವೇ ಒಂದಷ್ಟು ಆರೋಪಿಗಳ ಹೆಸರು ಲೀಕ್ ಆಗಿರುವುದಕ್ಕೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
'ಬಾರ್ ಅಂಡ್ ಬೆಂಚ್' ವರದಿ ಪ್ರಕಾರ, ರೌಸ್ ಅವೆನ್ಯೂ ಕೋರ್ಟ್‌ನಲ್ಲಿರುವ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಅಜಯ್ ಗುಪ್ತಾ ಅವರು, ಈ ಬೆಳವಣಿಗೆ ನಿಜಕ್ಕೂ ಶಾಕಿಂಗ್ ಎಂದಿದ್ದಾರೆ. ಆರೋಪಿಗಳಲ್ಲಿ ಕೆಲವರು ಅಪ್ರಾಪ್ತರಿದ್ದಾರೆ. ಹೀಗಿರುವಾಗ, ಅವರ ಬಗ್ಗೆಗಿನ ಮಾಹಿತಿ, ಹೆಸರುಗಳು ಮಾಧ್ಯಮಗಳಲ್ಲಿ ಸೋರಿಕೆ ಹೇಗಾಯಿತು? ಇದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.
ನೀಟ್ ಲೀಕ್ ಕುರಿತು ಸಲ್ಲಿಕೆಯಾಗಿರುವ ಚಾರ್ಜ್ ಶೀಟ್‌ನ ಭಾಗವಾಗಿರುವ ಮತ್ತು ಇನ್ನೂ ನ್ಯಾಯಾಂಗ ಪರಿಶೀಲನೆಗೆ ಒಳಪಡದ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಪ್ರಕರಣದಲ್ಲಿ ನಡೆಯುತ್ತಿರುವ ವಿಚಾರಣೆಗೆ ಯಾವುದೇ ರೀತಿಯ ಪೂರ್ವಾಗ್ರಹ ಉಂಟಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಕೋರ್ಟ್ ಸ್ಪಷ್ಟಪಡಿಸಿತು.
ವಿಚಾರಣೆಯ ವೇಳೆ ಸಿಬಿಐ ಪರ ವಕೀಲರು, ಚಾರ್ಜ್ ಶೀಟ್‌ನಲ್ಲಿರುವ ಸಾಕ್ಷಿಗಳ ಹೆಸರುಗಳು ಮಾಧ್ಯಮಗಳಲ್ಲಿ ಈಗಾಗಲೇ ಪ್ರಕಟವಾಗಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ಸಾಕ್ಷಿಗಳ ಪೈಕಿ ಕೆಲವರು ಅಪ್ರಾಪ್ತರು ಎಂಬುದನ್ನೂ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಮಾಧ್ಯಮಗಳಿಗೂ ಜವಾಬ್ದಾರಿಯಿದೆ. ಕ್ರಿಮಿನಲ್ ಕಾನೂನಿನ ಪ್ರಕಾರ, ವಿಚಾರಣೆ ನಡೆಯುವ ರೀತಿಯಲ್ಲಿ ಯಾವುದೇ ಅಡ್ಡಿ ಅಥವಾ ಪೂರ್ವಾಗ್ರಹ ಉಂಟಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿತು.
ಕೋರ್ಟ್‌ಗೆ ಸಲ್ಲಿಕೆಗೂ ಮುನ್ನ ಮಾಧ್ಯಮದ ಕೈಗೆ ಚಾರ್ಚ್ಶೀಟ್ ಹೇಗೆ?
ಆರೋಪಿಗಳ ಪರ ವಕೀಲರು, ಸಿಬಿಐ ಚಾರ್ಚ್ ಶೀಟ್ ಅನ್ನು ನ್ಯಾಯಾಲಯಕ್ಕೆ ಅಧಿಕೃತವಾಗಿ ಸಲ್ಲಿಸುವ ಮೊದಲೇ ಅದರ ಪ್ರತಿ ಮಾಧ್ಯಮಗಳ ಬಳಿ ಇತ್ತು ಎಂದು ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಾರ್ಜ್‌ಶೀಟ್‌ನಲ್ಲಿರುವ ಮಾಹಿತಿಯು ಹೇಗೆ ಸೋರಿಕೆಯಾಯಿತು ಎಂಬುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.
20,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ 13 ಆರೋಪಿಗಳು
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್ ಸುಮಾರು 20,000 ಪುಟಗಳನ್ನು ಹೊಂದಿದೆ. ಇದರಲ್ಲಿ, ಒಟ್ಟು 13 ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಸಿಬಿಐ ಅಧಿಕಾರಿಗಳ ಪ್ರಕಾರ, ದೆಹಲಿಯ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಕಚೇರಿಯಲ್ಲಿದ್ದ ನೀಟ್ ಪರೀಕ್ಷೆಯ ಪ್ರಶ್ನೆಗಳನ್ನು ಮೂರು ವಿಷಯ ತಜ್ಞರು ವಿವಿಧ ವಿಧಾನಗಳ ಮೂಲಕ ಸೋರಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಗೌಪ್ಯ ವಿಭಾಗದಿಂದ ಹೊರಬರುವಾಗ ಈ ವ್ಯಕ್ತಿಗಳನ್ನು ಸಮರ್ಪಕವಾಗಿ ತಪಾಸಣೆ ಮಾಡದಿರುವುದು ಪ್ರಶ್ನೆಪತ್ರಿಕೆ ಸೋರಿಕೆಗೆ ಅವಕಾಶ ಮಾಡಿಕೊಟ್ಟಿತು ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಹೇಳಿದೆ. ಚಾರ್ಜ್ ಶೀಟ್ ಕೈಗೆತ್ತಿಕೊಂಡಿರುವ ಕೋರ್ಟ್, ಆ.13ರಿಂದ ವಾದ-ಪ್ರತಿವಾದಗಳನ್ನು ಆಲಿಸುವುದಾಗಿ ತಿಳಿಸಿದೆ,(ಏಜೆನ್ಸೀಸ್).