ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್
ನವದೆಹಲಿ: ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು 15 ದಿನಗಳ ಕಾಲ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಜೈಲಿನಲ್ಲಿರುವ ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್(Umar Khalid) ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ(ಮೇ 19) ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.
ತನ್ನ ಚಿಕ್ಕಪ್ಪನ 40 ದಿನಗಳ ಮರಣೋತ್ತರ ಆಚರಣೆಯಲ್ಲಿ (ಚೆಹ್ಲುಮ್) ಪಾಲ್ಗೊಳ್ಳಲು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ತನ್ನ ತಾಯಿಯನ್ನು ನೋಡಿಕೊಳ್ಳಲು 15 ದಿನಗಳ ಮಧ್ಯಂತರ ಜಾಮೀನು ಕೋರಿ ಖಾಲಿದ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್ಪೈ, ಉಮರ್ ಖಾಲಿದ್ ಕೇಳಿರುವ ಹೇಳಿರುವ ಕಾರಣ ಅಸಮಂಜಸ ಎಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ 53 ಜನರು ಸಾವನ್ನಪ್ಪಿ 700 ಕ್ಕೂ ಹೆಚ್ಚು ಜನರು ಗಾಯಗೊಂಡ 2020 ರ ಗಲಭೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಖಾಲಿದ್ ಮತ್ತು ಇತರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ), ಭಯೋತ್ಪಾದನಾ ವಿರೋಧಿ ಕಾನೂನು ಹಾಗೂ ಭಾರತೀಯ ದಂಡ ಸಂಹಿತೆಯ(ಐಪಿಸಿ) ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ (ಏಜೆನ್ಸೀಸ್).