ಅಭಿಷೇಕ್ ಅಬ್ಬರ, ಮಲಿಂಗಾ ಘರ್ಜನೆಗೆ ಡೆಲ್ಲಿ ಕ್ಯಾಪಿಟಲ್ಸ್ ಧೂಳೀಪಟ! 47 ರನ್‌ಗಳಿಂದ ಸೋತ ಅಕ್ಷರ್ ಪಡೆ..
ಹೈದರಾಬಾದ್: ರಾಜೀವ್ ಗಾಂಧಿ ಮೈದಾನದಲ್ಲಿ ಇಂದು ನಡೆದ ಐಪಿಎಲ್ 2026ರ ರೋಚಕ ಹಣಾಹಣಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್(SRHvsDC) ವಿರುದ್ಧ 47 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡಿದೆ.
ಅಭಿಷೇಕ್ ಶರ್ಮಾ 'ರನ್ ಮಳೆ'
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಯುವ ಆಟಗಾರ ಅಭಿಷೇಕ್ ಶರ್ಮಾ ಆಸರೆಯಾದರು. ಆರಂಭದಿಂದಲೇ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಭಿಷೇಕ್, ಅಜೇಯ 135 ರನ್ ಚಚ್ಚುವ ಮೂಲಕ ಮೈದಾನದಲ್ಲಿ ರನ್ ಸುನಾಮಿ ಎಬ್ಬಿಸಿದರು. ಇವರ ಈ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.
ಹೈದರಾಬಾದ್ ಬೃಹತ್ ಮೊತ್ತ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಕಳೆದ ಪಂದ್ಯದ ಹೀರೊ ಅಭಿಷೇಕ್ ಶರ್ಮಾ 135 ರನ್(65, ಎಸೆತಗಳು) ಮತ್ತು ಟ್ರಾವಿಸ್ ಹೆಡ್(37 ರನ್) ಜೋಡಿ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕ ಮತ್ತು ಅಂತ್ಯದಲ್ಲಿ ಹೆನ್ರಿಚ್ ಕ್ಲಾಸೆನ್ ನಡೆಸಿದ ಸಿಡಿಲಬ್ಬರದ 37ರನ್‌ಗಳ ಬ್ಯಾಟಿಂಗ್ ನೆರವಿನಿಂದ SRH ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 242 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಈಶಾನ್ ಮಲಿಂಗಾ 'ಡೆತ್ ಓವರ್' ಮ್ಯಾಜಿಕ್
ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೈದರಾಬಾದ್‌ನ ಸ್ಟಾರ್ ಬೌಲರ್ ಈಶಾನ್ ಮಲಿಂಗಾ ಸಿಂಹಸ್ವಪ್ನವಾದರು. ತಮ್ಮ ವೇಗ ಮತ್ತು ನಿಖರ ಯಾರ್ಕರ್ ಮೂಲಕ ದೆಹಲಿಯ ಬ್ಯಾಟಿಂಗ್ ಬೆನ್ನೆಲುಬು ಮುರಿದ ಮಲಿಂಗಾ, ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಡೆಲ್ಲಿಯ ಅನಿಶ್ಚಿತ ಆಟ: ಹೋರಾಡಿ ಸೋತ ರಾಹುಲ್-ರಾಣಾ
ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಕೆ.ಎಲ್. ರಾಹುಲ್ ಮತ್ತು ನಿತೀಶ್ ರಾಣಾ ನಡುವಿನ 86 ರನ್‌ಗಳ ಜೊತೆಯಾಟ ತಂಡಕ್ಕೆ ಭರವಸೆ ಮೂಡಿಸಿತ್ತು. ರಾಣಾ ವೇಗದ ಅರ್ಧಶತಕ ಸಿಡಿಸಿ ರನ್ ಗತಿಯನ್ನು ಹೆಚ್ಚಿಸಿದ್ದರು. ಆದರೆ, ಮಲಿಂಗಾ ದಾಳಿಗೆ ಸಿಲುಕಿದ ದೆಹಲಿ ತಂಡ 107/1 ರಿಂದ ಕೇವಲ ಕೆಲವೇ ಕ್ಷಣಗಳಲ್ಲಿ 107/4ಕ್ಕೆ ಕುಸಿಯಿತು. ಈ ದಿಢೀರ್ ಕುಸಿತವೇ ದೆಹಲಿಯ ಸೋಲಿಗೆ ಮುಖ್ಯ ಕಾರಣವಾಯಿತು.
ಅಂತ್ಯದಲ್ಲಿ ಸಮೀರ್ ರಿಜ್ವಿ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅರ್ಧಶತಕದ ಜೊತೆಯಾಟವಾಡಿದರೂ, ಹೆಚ್ಚುತ್ತಿದ್ದ ರನ್ ರೇಟ್ ಒತ್ತಡದ ಮುಂದೆ ಡೆಲ್ಲಿ ಮಣಿಯಿತು. ಅಂತಿಮವಾಗಿ ಪ್ರವಾಸಿ ತಂಡ 200 ರನ್ ಗಡಿ ದಾಟಲು ವಿಫಲವಾಗಿ 47 ರನ್‌ಗಳಿಂದ ಸೋಲೊಪ್ಪಿಕೊಂಡಿತು,(ಏಜೆನ್ಸೀಸ್).