Delhi Assembly Bomb Threat | ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ 
ದೇಶ

ಪ್ರಧಾನಿ ಮೋದಿ, ಅಮಿತ್ ಷಾ ಹೆಸರು ಉಲ್ಲೇಖಿಸಿ ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ...ತನಿಖೆ ಚುರುಕುಗೊಳಿಸಿದ ಸೈಬರ್ ಕ್ರೈಂ | Delhi Assembly Bomb Threat

ನವದೆಹಲಿ: ದೆಹಲಿ ವಿಧಾನಸಭೆಗೆ ಕಳೆದ 24 ಗಂಟೆಗಳ ಅಂತರದಲ್ಲಿ ಎರಡನೇ ಬಾರಿ ಬಾಂಬ್ ಬೆದರಿಕೆ (Delhi Assembly Bomb Threat) ಇಮೇಲ್ ಬಂದಿರುವುದಾಗಿ ವರದಿಯಾಗಿದ್ದು, ಮುಖ್ಯಮಂತ್ರಿ ರೇಖಾ ಗುಪ್ತಾ ಬಜೆಟ್ ಮಂಡನೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಆಡಳಿತ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಬುಧವಾರ (ಮಾ.25) ಬೆಳಗಿನ ಜಾವ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾರ ಅಧಿಕೃತ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿರುವ ಕಿಡಿಗೇಡಿಗಳು, ನಡೆಯುತ್ತಿರುವ ಅಧಿವೇಶನದ ನಡುವೆಯೇ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಇಮೇಲ್‌ನಲ್ಲಿ ಹಲವಾರು ಪ್ರಚೋದನಕಾರಿ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ನಿನ್ನೆ (ಮಂಗಳವಾರ ಮಾ.24) ಬೆಳಿಗ್ಗೆ ಕೂಡ ಸ್ಪೀಕರ್ ಮತ್ತು ವಿಧಾನಸಭೆಯ ಅಧಿಕೃತ ಖಾತೆಗಳಿಗೆ ಇಂತಹದ್ದೇ ಬೆದರಿಕೆ ಸಂದೇಶಗಳು ಬಂದಿದ್ದವು. ಮಂಗಳವಾರದ ಇಮೇಲ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವು ಗಣ್ಯರ ಹೆಸರುಗಳನ್ನು ಪ್ರಸ್ತಾಪಿಸಲಾಗಿತ್ತು ಎನ್ನಲಾಗಿದೆ.
ಸತತ ಬೆದರಿಕೆಗಳ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಸ್ಥಳೀಯ ಪೊಲೀಸರು ಇಡೀ ವಿಧಾನಸಭಾ ಸಂಕೀರ್ಣವನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದಾರೆ. ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸಭೆ ಮತ್ತು ಸಮೀಪದ ಮೆಟ್ರೋ ನಿಲ್ದಾಣದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದ್ದು, ಪ್ರವೇಶ ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಮೇಲ್ ಮೂಲವನ್ನು ಪತ್ತೆಹಚ್ಚಲು ದೆಹಲಿ ಪೊಲೀಸರ ಸೈಬರ್ ಕ್ರೈಂ ವಿಭಾಗವು ತನಿಖೆಯನ್ನು ಚುರುಕುಗೊಳಿಸಿದ್ದು, ಐಪಿ ಟ್ರ್ಯಾಕಿಂಗ್ ಮತ್ತು ಇಮೇಲ್ ಹೆಡರ್ ವಿಶ್ಲೇಷಣೆಯ ಮೂಲಕ ಸಂದೇಶ ಕಳುಹಿಸಿದವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನಪ್ರತಿನಿಧಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಂದು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಠಿಣ ತನಿಖೆ ಮುಂದುವರಿದಿದೆ(ಏಜೆನ್ಸೀಸ್​).