ಸುಪ್ರೀಂಕೋರ್ಟ್ Supreme Court
ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವ ಹಿನ್ನೆಲೆ, ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (CAQM) ದೆಹಲಿ-NCR ಪ್ರದೇಶದಾದ್ಯಂತದ ಶಾಲೆಗಳು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಿಗದಿಯಾಗಿದ್ದ ಕ್ರೀಡೆ ಮತ್ತು ಅಥ್ಲೆಟಿಕ್ ಸ್ಪರ್ಧೆಗಳನ್ನು ಮುಂದೂಡುವಂತೆ ಸುಪ್ರೀಂಕೋರ್ಟ್(Supreme Court) ಬುಧವಾರ (ನ.19) ಸೂಚಿಸಿದೆ.
ದೆಹಲಿಯನ್ನು ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕುರಿತು ಎಂಸಿ ಮೆಹ್ತಾ ಅವರ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ವಾಯು ಗುಣಮಟ್ಟ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಇಳಿದಿದ್ದರೂ ಹಲವಾರು ಎನ್‌ಸಿಆರ್ ಶಾಲೆಗಳು ವಾರ್ಷಿಕ ಕ್ರೀಡಾಕೂಟಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಪೀಠವು ಮಧ್ಯಪ್ರವೇಶಿಸಿ ಈ ಅದೇಶ ನೀಡಿದೆ.
ಅಮಿಕಸ್ ಕ್ಯೂರಿಯಾಗಿ ಹಾಜರಾದ ಹಿರಿಯ ವಕೀಲೆ ಅಪರಾಜಿತಾ ಸಿಂಗ್, ಹಲವಾರು ಶಾಲೆಗಳು ವಿಷಕಾರಿ ಗಾಳಿಯ ನಡುವೆ ಕ್ರೀಡೆಗಳನ್ನು ನಡೆಸುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಮಕ್ಕಳು ಹೆಚ್ಚು ದುರ್ಬಲರಾಗಿದ್ದಾರೆ. ಈಗ ಕ್ರೀಡೆಗಳನ್ನು ನಡೆಸುವುದು ಅವರನ್ನು ಗ್ಯಾಸ್ ಚೇಂಬರ್‌ಗಳಲ್ಲಿ ಹಾಕುವಂತಿದೆ ಎಂದು ಸಿಂಗ್ ವಾದಿಸಿದರು ಎಂದು ಲೈವ್‌ಲಾ ವರದಿ ಮಾಡಿದೆ.
ಈ ಅರ್ಜಿಯನ್ನು ಪರಿಗಣಿಸಿದ ಪೀಠವು, ಇಂತಹ ಕ್ರೀಡಾ ಚಟುವಟಿಕೆಗಳನ್ನು ಸುರಕ್ಷಿತ ತಿಂಗಳುಗಳಿಗೆ ಸ್ಥಳಾಂತರಿಸಲು ಸೂಕ್ತ ನಿರ್ದೇಶನಗಳನ್ನು ನೀಡುವ ಬಗ್ಗೆ ಪರಿಗಣಿಸುವಂತೆ CAQM ಅನ್ನು ವಿನಂತಿಸಿದೆ. ಅಲ್ಲದೆ, ಮಧ್ಯಾಹ್ನದ ನಂತರ ದೆಹಲಿ ಹೈಕೋರ್ಟ್ ಮುಂದೆ ಇದೇ ರೀತಿಯ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಹೈಕೋರ್ಟ್ ಸೂಕ್ತವೆಂದು ಭಾವಿಸಿದಂತೆ ಆದೇಶಗಳನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೀರ್ಘಕಾಲದಿಂದ ನಡೆಯುತ್ತಿರುವ ಎಂಸಿ ಮೆಹ್ತಾ ಪ್ರಕರಣದಲ್ಲಿ ನ್ಯಾಯಾಲಯವು ಎನ್‌ಸಿಆರ್ ಮಾಲಿನ್ಯ ಬಿಕ್ಕಟ್ಟನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಈ ನಿರ್ದೇಶನ ಬಂದಿದೆ. ಅಲ್ಲದೆ, ಶಾಲೆಗಳು, ಆರೋಗ್ಯ ತಜ್ಞರು ಮತ್ತು ಪರಿಸರ ಅಧಿಕಾರಿಗಳು ಮಕ್ಕಳು ದೀರ್ಘಕಾಲದವರೆಗೆ ವಿಷಕಾರಿ ಗಾಳಿಗೆ ಒಡ್ಡಿಕೊಳ್ಳುವುದರ ಬಗ್ಗೆ ಹೆಚ್ಚುತ್ತಿರುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).