Patliputra Station | ರೈಲು ಲೇಟ್ ಆಯ್ತು ಅಂತ ಪರೀಕ್ಷಾ ಅಭ್ಯರ್ಥಿಗಳ ಆಕ್ರೋಶ!..ನಿಲ್ದಾಣದಲ್ಲಿ ಕಲ್ಲು ತೂರಾಟ 
ದೇಶ

ರೈಲು ಲೇಟ್ ಆಯ್ತು ಅಂತ ಪರೀಕ್ಷಾ ಅಭ್ಯರ್ಥಿಗಳ ಆಕ್ರೋಶ!..ನಿಲ್ದಾಣದಲ್ಲಿ ಕಲ್ಲು ತೂರಾಟ; ವಿಡಿಯೋ ವೈರಲ್ ​| Patliputra Station

ಪಟನಾ: ಬಿಹಾರದ ಪಾಟಲಿಪುತ್ರ ರೈಲ್ವೆ ನಿಲ್ದಾಣದಲ್ಲಿ (Patliputra Station) ಭಾನುವಾರ ಭಾರಿ ಹೈಡ್ರಾಮಾ ನಡೆದಿದ್ದು, ರಾಜ್ಯದ ಪ್ರಮುಖ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಹೊರಟಿದ್ದ ನೂರಾರು ಅಭ್ಯರ್ಥಿಗಳು ರೈಲು ಸಂಚಾರ ವಿಳಂಬವಾಗಿದ್ದನ್ನು ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ರೈಲ್ವೆ ಐಜಿ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಿಹಾರ ಪೊಲೀಸ್ ಪ್ರೊಹಿಬಿಷನ್ ಕಾನ್ಸ್‌ಟೇಬಲ್, ವಾರ್ಡರ್ ಮತ್ತು ಮೊಬೈಲ್ ಸ್ಕ್ವಾಡ್ ಕಾನ್‌ಸ್ಟೆಬಲ್ ಹುದ್ದೆಗಳ ಲಿಖಿತ ಪರೀಕ್ಷೆಗೆ ತೆರಳುತ್ತಿದ್ದ ಅಭ್ಯರ್ಥಿಗಳು, ರೈಲುಗಳು ತಡವಾಗಿ ಬಂದಿದ್ದರಿಂದ ತಮಗೆ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ಹಳಿಗಳನ್ನು ತಡೆದು ನಿಲ್ದಾಣದ ಆವರಣದಲ್ಲಿ ಧರಣಿ ನಡೆಸಿದರು.

ನಿಲ್ದಾಣದಲ್ಲಿ ವಿಧ್ವಂಸಕ ಕೃತ್ಯ, ಕಲ್ಲು ತೂರಾಟ

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಆಕ್ರೋಶಿತ ವಿದ್ಯಾರ್ಥಿಗಳು ಪ್ಲಾಟ್‌ಫಾರ್ಮ್‌ನಲ್ಲಿದ್ದ ಹಲವಾರು ಮಳಿಗೆಗಳು ಮತ್ತು ರೈಲ್ವೆ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದರು. ವಿಳಂಬವಾಗಿ ಬಂದ ರೈಲಿನ ಮೇಲೆಯೂ ಕಲ್ಲು ತೂರಾಟ ನಡೆಸಿದ್ದರಿಂದ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈಲಿನಲ್ಲಿ ಅತಿಯಾದ ಜನದಟ್ಟಣೆ ಇದ್ದುದರಿಂದ ಒಳಗೆ ಪ್ರವೇಶಿಸಲು ಸಾಧ್ಯವಾಗದ ಕೆಲವು ವಿದ್ಯಾರ್ಥಿಗಳು ರೈಲು ಮುಂದೆ ಚಲಿಸದಂತೆ ತಡೆದರು. ನಮಗೆ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಬೇರೆ ಯಾರಿಗೂ ಪರೀಕ್ಷೆ ಬರೆಯಲು ಬಿಡುವುದಿಲ್ಲ, ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂಬ ಉದ್ದೇಶದಿಂದ ಕೆಲವರು ಇಂಜಿನ್ ಮುಂದೆ ನಿಂತು ಕಲ್ಲು ತೂರಾಟ ನಡೆಸಿದರು ಎಂದು ಪ್ರತ್ಯಕ್ಷದರ್ಶಿ ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದಾರೆ.
ರೈಲ್ವೆ ಐಜಿಗೆ ಗಾಯ, ಪೊಲೀಸರೊಂದಿಗೆ ಘರ್ಷಣೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಐಜಿ ಜಿತೇಂದ್ರ ರಾಣಾ, ರೈಲ್ವೆ ಎಸ್ಪಿ, ಆರ್​​ಪಿಎಫ್​ ಅಧಿಕಾರಿಗಳು ಮತ್ತು ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದರು. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ರೈಲ್ವೆ ಐಜಿ ಜಿತೇಂದ್ರ ರಾಣಾ ಹಾಗೂ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಹಳಿಗಳನ್ನು ತೆರವುಗೊಳಿಸಲು ಭಾರಿ ಸಂಖ್ಯೆಯ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು. ಈ ಗದ್ದಲದಿಂದಾಗಿ ಹಲವು ರೈಲುಗಳು ಗಂಟೆಗಟ್ಟಲೆ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದವು.

4,128 ಹುದ್ದೆಗಳ ನೇಮಕಾತಿ ಪರೀಕ್ಷೆ

ಕೇಂದ್ರ ಆಯ್ಕೆ ಮಂಡಳಿ (ಕಾನ್‌ಸ್ಟೆಬಲ್ ನೇಮಕಾತಿ) ಒಟ್ಟು 4,128 ಹುದ್ದೆಗಳ ಭರ್ತಿಗಾಗಿ ಈ ಲಿಖಿತ ಪರೀಕ್ಷೆಯನ್ನು ಆಯೋಜಿಸಿದೆ. ಇದರಲ್ಲಿ 2,417 ವಾರ್ಡರ್, 1,603 ಪೊಲೀಸ್ ಪ್ರೊಹಿಬಿಷನ್ ಕಾನ್ಸ್‌ಟೇಬಲ್ ಮತ್ತು 108 ಮೊಬೈಲ್ ಸ್ಕ್ವಾಡ್ ಕಾನ್‌ಸ್ಟೆಬಲ್ ಹುದ್ದೆಗಳು ಸೇರಿವೆ(ಏಜೆನ್ಸೀಸ್​).