Laxmi Arrived 
ದೇಶ

ಮನೆಗೆ ಬಂದಳು ಮಹಾಲಕ್ಷ್ಮಿ.. ಹೆಣ್ಣು ಮಗು ಹುಟ್ಟಿದ್ದಕ್ಕೆ ಇಡೀ ಆಸ್ಪತ್ರೆಯನ್ನೇ ಹಬ್ಬದ ಮನೆಯನ್ನಾಗಿಸಿದ ಕುಟುಂಬ! | Laxmi Arrived

ಡೆಹ್ರಾಡೂನ್: ಹೆಣ್ಣು ಮಗು ಹುಟ್ಟಿದರೆ ಇಂದಿಗೂ ಕೆಲವು ಕಡೆ ಮುಖ ಸಿಂಡರಿಸುವವರ ಮಧ್ಯೆ, ಉತ್ತರಾಖಂಡದ ಡೆಹ್ರಾಡೂನ್‌ನ ಈ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ. ತಮ್ಮ ಮನೆಗೆ 'ಲಕ್ಷ್ಮಿ'(Laxmi Arrived) ಬಂದಿದ್ದಾಳೆ ಎಂಬ ಸಂಭ್ರಮದಲ್ಲಿ ಈ ಕುಟುಂಬ ಮಗುವನ್ನು ಬರಮಾಡಿಕೊಂಡ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೋಟಿಗಟ್ಟಲೆ ಜನರ ಮನ ಗೆಲ್ಲುತ್ತಿದೆ.

ಆಸ್ಪತ್ರೆ ಮುಂದೆ ಹಬ್ಬದ ವಾತಾವರಣ!

ಸಾಮಾನ್ಯವಾಗಿ ಆಸ್ಪತ್ರೆಯಿಂದ ಮಗು ಮತ್ತು ತಾಯಿಯನ್ನು ಮನೆಗೆ ಕರೆದೊಯ್ಯುವಾಗ ಸುಮ್ಮನೆ ಕಾರಿನಲ್ಲಿ ಕರೆದುಕೊಂಡು ಹೋಗುವುದು ವಾಡಿಕೆ. ಆದರೆ ಡೆಹ್ರಾಡೂನ್‌ನ ಈ ಕುಟುಂಬ ಮಾತ್ರ ವಿಭಿನ್ನವಾಗಿ ಯೋಚಿಸಿದೆ. ಆಸ್ಪತ್ರೆಯ ಮುಂದೆ ಸಾಲಾಗಿ ನಿಂತಿದ್ದ ಕಾರುಗಳನ್ನು ಗುಲಾಬಿ (Pink) ಮತ್ತು ಬಿಳಿ ಬಣ್ಣದ ಬಲೂನ್‌ಗಳಿಂದ ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಕಾರುಗಳ ಮೇಲೆ "ನಮಗೆ ಮಗಳು ಹುಟ್ಟಿದ್ದಾಳೆ" (We've had a daughter) ಎಂಬ ದೊಡ್ಡ ಬ್ಯಾನರ್‌ಗಳನ್ನು ಹಾಕಲಾಗಿತ್ತು.

ನಮ್ಮ ಲಕ್ಷ್ಮಿ ಬಂದಿದ್ದಾಳೆ: ತಾಯಿಯ ಭಾವುಕ ನುಡಿ

ನವಜಾತ ಶಿಶುವಿನ ತಾಯಿ ದೀಕ್ಷಾ ಅವರು ಈ ಸಂಭ್ರಮದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ, ಈಗ ನಮ್ಮ ಸಂಸಾರ ಪೂರ್ಣಗೊಂಡಿದೆ" ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ. ಮಗುವನ್ನು ಕಾರಿಗೆ ಹತ್ತಿಸುವಾಗ ಇಡೀ ಕುಟುಂಬ ಕುಣಿದು ಕುಪ್ಪಳಿಸಿ ಸಂಭ್ರಮಿಸಿದೆ. ಈ ವಿಡಿಯೋದಲ್ಲಿ "ನಮ್ಮ ಲಕ್ಷ್ಮಿ ಬಂದಿದ್ದಾಳೆ" ಎಂಬ ಬರಹವಿದ್ದು, ಹೆಣ್ಣು ಮಗುವನ್ನು ಸಮೃದ್ಧಿ ಮತ್ತು ಸಂತೋಷದ ಸಂಕೇತವಾಗಿ ಆ ಕುಟುಂಬ ಬಿಂಬಿಸಿದೆ.

ನೆಟ್ಟಿಗರ ಮೆಚ್ಚುಗೆಯ ಮಹಾಪೂರ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಕುಟುಂಬದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಈ ವಿಡಿಯೋ ಸಮಾಜದ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ಮಗು ನಿಜಕ್ಕೂ ಅದೃಷ್ಟವಂತೆ, ಇಂತಹ ಅದ್ಭುತ ಕುಟುಂಬ ಸಿಕ್ಕಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ. ಹೆಣ್ಣು ಮಗುವಿನ ಜನನವನ್ನು ಹೀಗೆ ಸಂಭ್ರಮಿಸುವುದು ಎಲ್ಲರಿಗೂ ಒಂದು ಉತ್ತಮ ಉದಾಹರಣೆ ಎಂದು ಹಲವರು ಶ್ಲಾಘಿಸಿದ್ದಾರೆ,(ಏಜೆನ್ಸೀಸ್​).