Rabri Devi > ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ
ಪಟನಾ: ಬಿಹಾರದ ರಾಜಕಾರಣದಲ್ಲಿ ಸದ್ಯ ಹಳೆಯ ಹಠ ಮತ್ತು ಹೊಸ ಸರ್ಕಾರದ ಕಠಿಣ ನಿಲುವುಗಳ ನಡುವೆ ದೊಡ್ಡ ಬಂಗಲೆಯ ಸಮರ ಆರಂಭವಾಗಿದೆ. ಆರ್‌ಜೆಡಿ ಪಕ್ಷದ ಪ್ರಭಾವಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ಪಟನಾದ 10, ಸರ್ಕ್ಯುಲರ್ ರೋಡ್ ಬಂಗಲೆಯನ್ನು ಖಾಲಿ ಮಾಡಲು ನಿರಾಕರಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಈ ಬಂಗಲೆಯಲ್ಲಿ ವಾಸಿಸುತ್ತಿರುವ ರಾಬ್ರಿ ದೇವಿ, ಸರ್ಕಾರ ಬಲಪ್ರಯೋಗ ಮಾಡಿದರೂ ಎದುರಿಸಲು ಸಿದ್ಧರಾಗಿದ್ದಾರಂತೆ.
ಮೇಲ್ನೋಟಕ್ಕೆ ಇದು ಆಡಳಿತಾರೂಢ ಎನ್‌ಡಿಎ (NDA) ಸರ್ಕಾರದ ವಿರುದ್ಧದ ರಾಜಕೀಯ ಹೋರಾಟದಂತೆ ಕಂಡರೂ, ಇದರ ಹಿಂದೆ ಒಂದು ಮೂಢನಂಬಿಕೆ ಅಡಗಿದೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಶುಭ ಬಂಗಲೆಯ ಭೀತಿ!...
ರಾಬ್ರಿ ದೇವಿ ಅವರ ಈ ತೀವ್ರ ಪ್ರತಿರೋಧಕ್ಕೆ ಸರ್ಕಾರ ಅವರಿಗೆ ನೀಡಲು ಮುಂದಾಗಿರುವ ಪರ್ಯಾಯ ನಿವಾಸವೇ ಕಾರಣ. ಸರ್ಕಾರ ಅವರಿಗೆ ಪ್ಲಶ್ ಲೋಕಾಲಿಟಿಯಲ್ಲಿರುವ 39, ಹಾರ್ಡಿಂಗ್ ರೋಡ್ ಬಂಗಲೆಯನ್ನು ಹಂಚಿಕೆ ಮಾಡಿದೆ. ಆದರೆ, ಈ ಬಂಗಲೆಗೆ ಬಿಹಾರ ರಾಜಕಾರಣದಲ್ಲಿ ಒಂದು ಜ್ಯೋತಿಷ್ಯ ಮತ್ತು ಮೂಢನಂಬಿಕೆಯ ಹಿನ್ನೆಲೆಯಿದೆ.
ಹಾರ್ಡಿಂಗ್ ರೋಡ್ ನಿವಾಸದಲ್ಲಿ ವಾಸವಿದ್ದ ನಾಯಕರ ಇತಿಹಾಸ ಹೀಗಿದೆ
- ಭೂಪೇಂದ್ರ ಪ್ರಸಾದ್ ವರ್ಮಾ (RJD)
- ಮದನ್ ಮೋಹನ್ ಝಾ (ಕಾಂಗ್ರೆಸ್)
- ಶಮೀಮ್ ಅಹ್ಮದ್ (RJD)
- ಚಂದ್ರಮೋಹನ್ ರೈ (BJP)
- ವಿನೋದ್ ನಾರಾಯಣ್ ಝಾ (BJP)
- ರಾಮಸೂರತ್ ರೈ (BJP)
ಕುತೂಹಲಕಾರಿ ಸಂಗತಿಯೆಂದರೆ, ಈ ಬಂಗಲೆಯಲ್ಲಿ ವಾಸವಿದ್ದ ಮೇಲಿನ ಯಾವುದೇ ನಾಯಕರು ತದನಂತರದ ದಿನಗಳಲ್ಲಿ ಮತ್ತೆ ಮಂತ್ರಿಯಾಗಲು ಸಾಧ್ಯವಾಗಲೇ ಇಲ್ಲ. ಅವರೆಲ್ಲರೂ ರಾಜಕೀಯವಾಗಿ ನೇಪಥ್ಯಕ್ಕೆ ಸರಿದರು. ಪ್ರಸ್ತುತ 67 ವರ್ಷದ ರಾಬ್ರಿ ದೇವಿ ವೈಯಕ್ತಿಕ ಮತ್ತು ತಮ್ಮ ಕುಟುಂಬದ ರಾಜಕೀಯ ಭವಿಷ್ಯ ಇಲ್ಲಿಗೆ ಕೊನೆಗೊಳ್ಳಬಾರದು ಎಂಬ ದೃಷ್ಟಿಯಿಂದ, ಈ ಅಶುಭ ಎನ್ನಲಾದ ಬಂಗಲೆಗೆ ಹೋಗಲು ಸಿದ್ಧರಿಲ್ಲ ಎಂದು ತಿಳಿದುಬಂದಿದೆ.
ರಾಜಕೀಯ ಪ್ರತಿಷ್ಠೆಯ ಕಣವಾದ 10, ಸರ್ಕ್ಯುಲರ್ ರೋಡ್
ರಾಬ್ರಿ ದೇವಿ ಮತ್ತು ಲಾಲೂ ಪ್ರಸಾದ್ ಯಾದವ್ ಕುಟುಂಬಕ್ಕೆ ಈ ಬಂಗಲೆ ಕೇವಲ ನಿವಾಸವಲ್ಲ, ಅದು ಬಿಹಾರದಲ್ಲಿ ಆರ್‌ಜೆಡಿ ಪಕ್ಷದ ಅಸ್ತಿತ್ವ ಮತ್ತು ಮೊದಲ ಕುಟುಂಬದ ಸರ್ವಾಧಿಕಾರದ ಸಂಕೇತವಾಗಿದೆ. 1997 ರಿಂದ 2005 ರವರೆಗೆ ಬಿಹಾರದ ಸಿಎಂ ಆಗಿದ್ದ ರಾಬ್ರಿ ದೇವಿ, ಕಳೆದ 21 ವರ್ಷಗಳಿಂದ ಇಲ್ಲೇ ಇದ್ದಾರೆ. ರಾಜ್ ಭವನ ಮತ್ತು ಮುಖ್ಯಮಂತ್ರಿ ನಿವಾಸಕ್ಕೆ ಅತ್ಯಂತ ಹತ್ತಿರವಿರುವ ಈ ಬಂಗಲೆ, ಲಾಲೂ ಕುಟುಂಬದ ಪವರ್ ಸೆಂಟರ್ ಕೂಡ ಆಗಿದೆ.
ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅಧಿಕಾರಕ್ಕೆ ಬಂದ ತಕ್ಷಣ, ಈ ಸರ್ಕ್ಯುಲರ್ ರೋಡ್ ಬಂಗಲೆಯನ್ನು ಕೇವಲ ಉಪ ಮುಖ್ಯಮಂತ್ರಿಯಾಗಿ ಬರುವವರಿಗೆ ಮಾತ್ರ ಮೀಸಲಿಡುವ ಆದೇಶ ಹೊರಡಿಸಿದರು. ರಾಬ್ರಿ ದೇವಿ ಸದ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿಯಾಗಿರುವುದರಿಂದ ಅವರಿಗೆ ಹಾರ್ಡಿಂಗ್ ರೋಡ್ ಮನೆಗೆ ಹೋಗುವಂತೆ ಸೂಚಿಸಲಾಯಿತು. ಆದರೆ ಲಾಲೂ ಕುಟುಂಬ ಮನೆ ಖಾಲಿ ಮಾಡದ ಕಾರಣ, ಅಂದಿನ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಕಾಯುವಂತಾಯಿತು. ಈಗ ಈ ಬಂಗಲೆಯನ್ನು ಹೊಸದಾಗಿ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ನಂದಕಿಶೋರ್ ರಾಮ್ ಅವರಿಗೆ ಹಂಚಿಕೆ ಮಾಡಲಾಗಿದ್ದು, ಅಲ್ಲಿ ಹೊಸ ನೇಮ್‌ಪ್ಲೇಟ್ ಅಳವಡಿಸುವ ಸಿದ್ಧತೆಗಳು ನಡೆದಿವೆ.
ಮುಖಾಮುಖಿ ಹೋರಾಟಕ್ಕೆ ಸವಾಲ್
ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಿರುದ್ಧ ನೇರ ಸಮರ ಸಾರಿರುವ ರಾಬ್ರಿ ದೇವಿ, ಹೊಸದಾಗಿ ಸಿಎಂ ಆಗಿರುವ ಚೌಧರಿ ತುಂಬಾ ಉತ್ಸಾಹದಲ್ಲಿದ್ದಾರೆ ಎಂಬುದು ನನಗೆ ಗೊತ್ತು. ಅವರು ಬೇಕಿದ್ದರೆ ಬಲಪ್ರಯೋಗ ಮಾಡಿ ನನ್ನನ್ನು ಹೊರಹಾಕಲಿ, ನಾನು ಮಾತ್ರ ಸ್ವಇಚ್ಛೆಯಿಂದ ಈ ಮನೆ ಖಾಲಿ ಮಾಡಲ್ಲ ಎಂದು ಸವಾಲು ಹಾಕಿದ್ದಾರೆ. ಶನಿವಾರವಷ್ಟೇ ಪೊಲೀಸರ ತಂಡವೊಂದು ಅವರನ್ನು ಸಮಾಧಾನಪಡಿಸಲು ಹೋಗಿ ವಿಫಲವಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಕಟ್ಟಡ ನಿರ್ಮಾಣ ಸಚಿವೆ ಲೇಶಿ ಸಿಂಗ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದು, ಬಂಗಲೆಗಳನ್ನು ಯಾರಿಗೆ ನೀಡಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ಯಾರೂ ಇದನ್ನು ಹಕ್ಕಾಗಿ ಪಡೆಯಲು ಸಾಧ್ಯವಿಲ್ಲ, ಮಾಜಿ ಸಿಎಂ ಆಗಿ ರಾಬ್ರಿ ದೇವಿ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ತುಘಲಕ್ ದರ್ಬಾರ್ ಎಂದ ರೋಹಿಣಿ ಆಚಾರ್ಯ
ಲಾಲೂ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಈ ವಿಚಾರದಲ್ಲಿ ಬಿಹಾರದ ಎನ್‌ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಸಂಪೂರ್ಣವಾಗಿ ರಾಜಕೀಯ ಸೇಡಿನ ಕ್ರಮ ಎಂದು ಆರೋಪಿಸಿದ್ದಾರೆ.
ಧೈರ್ಯವಿದ್ದರೆ ಬಲವಂತವಾಗಿ ಮನೆಯಿಂದ ಹೊರಹಾಕಿ ನೋಡಿ. ರಾಬ್ರಿ ದೇವಿ ಅವರನ್ನು ಮನೆಯಿಂದ ಹೊರಹಾಕಲು ಪೊಲೀಸರನ್ನು ಕಳುಹಿಸುತ್ತಿರುವುದು ಪ್ರಜಾಪ್ರಭುತ್ವವಲ್ಲ, ಇದು ಅಧಿಕಾರದ ಅಹಂಕಾರ ಮತ್ತು ತುಘಲಕ್ ಆದೇಶ. ನಿರುದ್ಯೋಗ, ಭ್ರಷ್ಟಾಚಾರ ಮತ್ತು ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಹಾರ ಸರ್ಕಾರ, ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡುವುದರಲ್ಲಿ ಮಾತ್ರ ಸಕ್ರಿಯವಾಗಿದೆ ಎಂದು ರೋಹಿಣಿ ಆಚಾರ್ಯ ಆಕ್ರೋಶ ಹೊರಹಾಕಿದ್ದಾರೆ.
ಈ ಬಂಗಲೆ ವಿವಾದವು ಬಿಹಾರದ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದ್ದು, ಒಂದೆಡೆ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟವು ಲಾಲೂ ಕುಟುಂಬದ ರಾಜಕೀಯ ಪ್ರಭಾವ ಕುಗ್ಗಿಸಲು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಲಾಲೂ ಕುಟುಂಬವು ತನ್ನ ಅಸ್ತಿತ್ವ ಮತ್ತು ರಾಜಕೀಯ ಭವಿಷ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ರಾಜಕೀಯ ಹಠ ಮತ್ತು ಮೂಢನಂಬಿಕೆಯ ಅಪರೂಪದ ಈ ಮಿಶ್ರಣವು ಮುಂದಿನ ದಿನಗಳಲ್ಲಿ ಬಿಹಾರ ರಾಜಕಾರಣದಲ್ಲಿ ಯಾವ ರೀತಿಯ ಕಾನೂನು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್).