ದೆಹಲಿಯ ದ್ವಾರಕಾದಲ್ಲಿ ಸರ್ಕಾರಿ ಅಧಿಕಾರಿ ನಿಗೂಢ ಸಾವು
- ದೆಹಲಿಯ ದ್ವಾರಕಾದಲ್ಲಿ ಸರ್ಕಾರಿ ಅಧಿಕಾರಿ ನಿಗೂಢ ಸಾವು
- ಗರ್ಭಿಣಿಯಾಗಿದ್ದ ರಕ್ಷಣಾ ಸಚಿವಾಲಯದ ಅಧಿಕಾರಿ ನಾಜಿಯಾ ಖಾನಂ
- ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ
Pregnant Woman Death: ದೆಹಲಿಯ ದ್ವಾರಕಾದಲ್ಲಿ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಸರ್ಕಾರಿ ಅಧಿಕಾರಿ ನಾಜಿಯಾ ಖಾನಂ(30) ನಿಗೂಢವಾಗಿ ಮೃತಪಟ್ಟಿದ್ದಾರೆ. ಸುಮಾರು ಮೂರು ತಿಂಗಳ ಗರ್ಭಿಣಿಯಾಗಿದ್ದ ನಾಜಿಯಾ, ಆಗಸ್ಟ್ 21ರ ಬೆಳಗಿನ ಜಾವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಾಜಿಯಾ, ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 11ರಂದು ಅಜಂ ಅಲಿ ಖಾನ್ ಅವರನ್ನು ಮದುವೆಯಾಗಿದ್ದರು. ನಾಜಿಯಾಗೆ ಗಂಡ ಹಾಗೂ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಗಂಡ ಅಜಂ ಅಲಿ ಖಾನ್, ಅತ್ತೆ ಸಮೀನ್ ನಿಶಾ ಹಾಗೂ ಮಾವ ಬಾಬರ್ ಅಲಿ ಖಾನ್ ವಿರುದ್ಧ ಆರೋಪ ಕೇಳಿಬಂದಿದೆ
ಗಂಡ, ಅತ್ತೆ-ಮಾವನ ವಿರುದ್ಧ ಆರೋಪ
ನಾಜಿಯಾ ಹಲವು ಬಾರಿ ತವರು ಮನೆಯವರ ಬಳಿ ಗಂಡ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿಕೊಂಡಿದ್ದರು. ಆಗಸ್ಟ್ 21ರಂದು ಬೆಳಗ್ಗೆ ಸುಮಾರು 4 ಗಂಟೆಗೆ ನಾಜಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಕುಟುಂಬಸ್ಥರಿಗೆ ತಿಳಿಸಲಾಗಿತ್ತು. ಇನ್ನು, ನಾಜಿಯಾರ ತಂದೆ ತವಾಬ್ ಖಾನ್, ಮಗಳ ಸಾವಿಗೆ ಆಕೆಯ ಗಂಡನೇ ಕಾರಣ ಎಂದು ಆರೋಪಿಸಿದ್ದು, ಕೊಲೆ ಮಾಡಿ ಆತ್ಮಹತ್ಯೆಯಂತೆ ಬಿಂಬಿಸಲು ನಾಟಕವಾಡಿದ್ದಾರೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದ ಪತಿ
ಮಾಹಿತಿ ಪ್ರಕಾರ, ಗಂಡನ-ದಂಪತಿ ನಡುವೆ ಜಗಳ ನಡೆದಿತ್ತು. ಬಳಿಕ ನಾಜಿಯಾ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ನಂತರ ಕೋಣೆಗೆ ಹೋಗಿ ನೋಡಿದಾಗ, ಆಕೆ ಕಿಟಕಿಗೆ ನೇಣು ಹಾಕಿಕೊಂಡಿದ್ದಳು ಎಂದು ಪತಿ ಹೇಳಿದ್ದಾನೆ. ಇನ್ನೊಂದೆಡೆ ನಾಜಿಯಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ, ಕುಟುಂಬಸ್ಥರ ಹೇಳಿಕೆ ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್).