ಸಾಂದರ್ಭಿಕ ಚಿತ್ರ 
ದೇಶ

ಹನಿಟ್ರ್ಯಾಪ್​ ಬಲೆಗೆ ಬಿದ್ದು ಪಾಕ್​ಗೆ ದೇಶದ ರಕ್ಷಣಾ ಮಾಹಿತಿ ಸೋರಿಕೆ; ಐಎಎಫ್ ಅಧಿಕಾರಿ ಬಂಧಿಸಿದ ದೆಹಲಿ ಪೊಲೀಸರು | IAF official

ನವದೆಹಲಿ: ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಬೀಸಿದ ಸಾಮಾಜಿಕ ಜಾಲತಾಣದ ಹನಿಟ್ರ್ಯಾಪ್​ ಬಲೆಗೆ ಬಿದ್ದು, ದೇಶದ ರಕ್ಷಣಾ ಮಾಹಿತಿ ಸೋರಿಕೆ ಮಾಡಿದ ಆರೋಪ ಮೇಲೆ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್(IAF official) ಒಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ(ಆ. 08) ವರದಿಯಾಗಿದೆ.
ಎಎನ್​ಐ ವರದಿ ಪ್ರಕಾರ, ಆರೋಪಿ ಅಧಿಕಾರಿ ಪ್ರಸ್ತುತ ನ್ಯಾಯಾಂಗ ಬಂಧನಲ್ಲಿದ್ದಾರೆ. ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದ್ದು, ಬಂಧಿತ ವಿಂಗ್‌ ಕಮಾಂಡರ್‌ ಫೀಲ್ಡ್​ ಯೂನಿಟ್‌ನಲ್ಲಿ ಕೆಲಸ ಮಾಡ್ತಿದ್ದನು ಎನ್ನಲಾಗಿದೆ.
ಐಎಎಫ್‌ನ ಗುಪ್ತಚರ ವಿಭಾಗವು ದೆಹಲಿ ಪೊಲೀಸರಿಗೆ ನೀಡಿದ ಖಚಿತ ಮಾಹಿತಿ ಮೇರೆಗೆ ಮೇ 31ರ ರಾತ್ರಿ ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ಬಂಧಿಸಲಾಗಿದೆ. ಇದು ಕೇವಲ ವ್ಯಕ್ತಿಗತ ಕೃತ್ಯವಲ್ಲದೆ, ಕಾರ್ಯತಂತ್ರದ ಮಿಲಿಟರಿ ಗುಪ್ತಚರವನ್ನು ಗುರಿಯಾಗಿಸಿಕೊಂಡಿರುವ ದೊಡ್ಡ ಮಟ್ಟದ ಅಂತರರಾಷ್ಟ್ರೀಯ ಬೇಹುಗಾರಿಕೆ ಜಾಲದ ಭಾಗವಾಗಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ವೈಯಕ್ತಿಕ ಜೀವನದಲ್ಲಿ ನಿರಾಶೆ ಹೊಂದಿದ್ದ ಅಧಿಕಾರಿಯನ್ನು ಗುರಿಯಾಗಿಸಿ ಸೋಶಿಯಲ್‌ ಮೀಡಿಯಾ ಮೂಲಕ ಮಹಿಳೆಯೊಬ್ಬರು ಸಂಪರ್ಕ ಸಾಧಿಸಿದ್ದಾರೆ. ಬಳಿಕ ಚಾಟ್‌ಗಳು ಮತ್ತು ವಿಡಿಯೋ ಕರೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಐಎಎಫ್​ ಅಧಿಕಾರಿಯ ವಿಶ್ವಾಸಗಳಿಸಿದ್ದಾರೆ.
ಬಳಿಕ ಸೇನಾ ಪಡೆಗಳ ಚಲನವಲನ, ನಿಯೋಜನೆ, ಫೋಟೋ ಮತ್ತು ವೀಡಿಯೊ ಸೇರಿ ಸೂಕ್ಷ್ಮ ದತ್ತಾಂಶಗಳನ್ನು ಡಿಜಿಟಲ್‌ ಮಾಧ್ಯಮದ ಮೂಲಕ ಮಹಿಳೆ ಅಧಿಕಾರಿಯಿಂದ ವರ್ಗಾಯಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಮತ್ತೊಬ್ಬ ಸಹೋದ್ಯೋಗಿಯ ಮೊಬೈಲ್‌ ಫೋನ್‌ನಲ್ಲಿ ನಿರ್ದಿಷ್ಟ ಅಪ್ಲಿಕೇಶನ್‌ ಒಂದನ್ನು ಇನ್‌ಸ್ಟಾಲ್‌ ಮಾಡಲು ಸೂಚಿಸಿದ್ದಾಳೆ.

ಈ ಅಪ್ಪಿಕೇಷನ್ ಡೇಟಾ ಕದಿಯಲು ಮತ್ತು ಲೊಕೇಶನ್‌ ಟ್ರ್ಯಾಕ್‌ ಮಾಡಲು ಹಾಗೂ ಸಂವಹನಗಳನ್ನು ಪ್ರತಿಬಂಧಿಸಲು ಬಳಸುವ ಸ್ಪೈವೇರ್‌ ಅಥವಾ ರಿಮೋಟ್‌-ಆಕ್ಸೆಸ್‌‍ ಮಾಲ್‌ವೇರ್‌ ಆಗಿತ್ತು ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಮತ್ತು ಮಹಿಳೆ ತೆರೆಮೆರೆ ಪಾಕ್ ಮೂಲದ ಹ್ಯಾಂಡ್​ಲರ್​ಗಳ ನಿರ್ದೇಶನದಂತೆ ಕೆಲಸ ಮಾಡಿದ್ದಾಳೆ. ಆರೋಪಿ ಎಷ್ಟು ಪ್ರಮಾಣದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).