ಮುಂಬೈ: ಮಹರಾಷ್ಟ್ರದ ಲಾತೂರ್ ಹೊರತುಪಡಿಸಿ ಬೃಹನ್ಮುಂಬೈ ಸೇರಿ 27 ಪುರಸಭೆಗಳ ಚುನಾವಣೆಯಲ್ಲಿ ಆಡಳಿರೂಢ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಜಯಗಳಿಸಿದೆ. ಕಳೆದ ಮೂವತ್ತು ವರ್ಷಗಳಿಂದ ಉದ್ದವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನಾ ಪಕ್ಷದ ಹಿಡಿತದಲ್ಲಿದ್ದ ಮುಂಬೈ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಜಾರಿದೆ.
ಪಕ್ಷದ ಸೋಲಿನ ಬಳಿಕ ಮೊದಲ ಬಾರಿಗೆ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ, ರಾಜಕೀಯ ಹೋರಾಟದ ಯುದ್ದ ಇನ್ನೂ ಮುಗಿದಿಲ್ಲ. ಮರಾಠಿ ವ್ಯಕ್ತಿ ಅರ್ಹ ಗೌರವ ಸಿಗುವವರೆಗೂ ಇದು ಹೀಗೆ ಮುಂದುವರೆಯುತ್ತದೆ ಎಂದು ಹೇಳಿದೆ.
ಮುಂಬೆ ಮಹಾನಗರ ಪಾಲಿಕೆಯ 227 ಸ್ಥಾನಗಳ ಪೈಕಿ ಬಿಜೆಪಿ 89 ಅದರ ಮಿತ್ರ ಪಕ್ಷ ಶಿಂಧೆ ಶಿವಸೇನಾ 29 ಸ್ಥಾನಗಳಲ್ಲಿ ಗೆದ್ದು ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಬಹುಮತವನ್ನು ಗಳಿಸಿವೆ. ಏಕನಾಥ್ ಶಿಂಧೆಯ ಒಪ್ಪಿಗೆ ಮೇರೆಗೆ ಬಿಜೆಪಿ ಮೇಯರ್ ಅಧಿಕಾರಕ್ಕೆ ಬರಬಹುದು ಎನ್ನಲಾಗಿದೆ.
ಇನ್ನೂ ವಿರೋಧ ಪಕ್ಷಗಳ ಪೈಕಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಗಮನಾರ್ಹ ಸಾಧನೆ ಮಾಡಿದ್ದು 65 ಸ್ಥಾನಗಳಲ್ಲಿ ಗೆದ್ದಿದೆ. ಮಿತ್ರ ಪಕ್ಷ ಎಂಎನ್ಎಸ್ 6, ಕಾಂಗ್ರೆಸ್ 24 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮೇಲಿನ ಉದ್ದವ್ ಠಾಕ್ರೆ ಅವರ ಈ ಬಾರಿಯ ಚುನಾವಣೆಯಲ್ಲಿ ಕೈ ತಪ್ಪಿದೆ.
ಪ್ರಧಾನಿ ಮೋದಿ ಅಭಿನಂದನೆ
ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲು ಕಾರಣರಾದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದು, ಈ ಗೆಲುವು ರಾಜ್ಯದ ಜನರೊಂದಿಗಿನ ಮೈತ್ರಿಕೂಟದ ಬಾಂಧವ್ಯವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಜನರು ಪ್ರಗತಿಗೆ ವೇಗ ನೀಡಲು ಮತ್ತು ರಾಜ್ಯವು ಸಂಬಂಧಿಸಿರುವ ಅದ್ಭುತ ಸಂಸ್ಕೃತಿಯನ್ನು ಆಚರಿಸಲು ತಮ್ಮ ಒಂದು ಮತವನ್ನು ಮೀಸಲಿಟ್ಟಿದ್ದಾರೆ. ಮಹಾರಾಷ್ಟ್ರದಾದ್ಯಂತ ಜನರ ನಡುವೆ ಅವಿಶ್ರಾಂತವಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ನಮ್ಮ ಮೈತ್ರಿಕೂಟದ ಹಿಂದಿನ ಸಾಧನೆಗಳ ಬಗ್ಗೆ ಮಾತನಾಡಿದರು, ಮುಂಬರುವ ಕಾಲಕ್ಕೆ ನಮ್ಮ ದೃಷ್ಟಿಕೋನವನ್ನು ರಾಜ್ಯಕ್ಕೆ ಎತ್ತಿ ತೋರಿಸಿದರು ಮತ್ತು ವಿರೋಧ ಪಕ್ಷದ ಸುಳ್ಳುಗಳನ್ನು ಪರಿಣಾಮಕಾರಿಯಾಗಿ ಎದುರಿಸಿದರು. ಅವರೆಲ್ಲರಿಗೂ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ (ಏಜೆನ್ಸೀಸ್).