Tamil Nadu Election Results
- ಕೇವಲ ಒಂದೇ ಒಂದು ಮತದ ಅಂತರದಿಂದ ಸೋಲು ಕಂಡ ಡಿಎಂಕೆ ಸಚಿವ
- ಸಚಿವ ಕೆ ಆರ್ ಪೆರಿಯಕರುಪ್ಪನ್ರನ್ನು ಸೋಲಿಸಿದ ಟಿವಿಕೆ ಅಭ್ಯರ್ಥಿ
- ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಅಭ್ಯರ್ಥಿಗೆ ಸಿಕ್ಕ ಐತಿಹಾಸಿಕ ಜಯ
ತಿರುಪ್ಪತ್ತೂರು: ತಮಿಳುನಾಡಿನಲ್ಲಿ (Tamil Nadu Election Results ) ತಮಿಳಿಗ ವೆಟ್ರಿ ಕಳಗಂ ಸಂಸ್ಥಾಪಕ ವಿಜಯ್ ಪಕ್ಷಕ್ಕೆ ರೋಚಕ ಗೆಲುವು ಸಿಕ್ಕಿದೆ. ತಮಿಳಿಗರು ನೆಚ್ಚಿನ ನಟನ ಕೈ ಬಿಗಿಯಾಗಿ ಹಿಡಿದಿದ್ದಾರೆ. ಆ ಮೂಲಕ ಎಂಕೆ ಸ್ಟಾಲಿನ್ ಸೇರಿದಂತೆ ಘಟಾನುಘಟಿ ನಾಯಕರನ್ನೇ ಟಿವಿಕೆಯ ನಾಯಕರು ಮಣ್ಣು ಮುಕ್ಕುವಂತೆ ಮಾಡಿದ್ದಾರೆ.
ಈ ಮಧ್ಯೆ ತಮಿಳುನಾಡು ಸಚಿವ ಹಾಗೂ ಹಿರಿಯ ಡಿಎಂಕೆ ನಾಯಕ ಕೆ.ಆರ್. ಪೆರಿಯಕರುಪ್ಪನ್ ಅವರು ತಿರುಪ್ಪತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಒಂದೇ ಒಂದು ವೋಟಿನಿಂದ ಶಾಸಕ ಪದವಿಯನ್ನು ಕಳೆದುಕಕೊಂಡು ಅಘಾತಕ್ಕೊಳಗಾಗಿದ್ದಾರೆ. ಅಲ್ಲದೆ ಈ ಘಟನೆಯು ಮತ ಎಣಿಕೆ ವಿಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಗಲಭೆಗೆ ನಾಂದಿ ಹಾಡಿತು.
ಹೌದು, ಶಿವಗಂಗಾ ಜಿಲ್ಲೆಯ ತಿರುಪ್ಪತ್ತೂರು ಕ್ಷೇತ್ರದಲ್ಲಿ ತಮಿಳುನಾಡು ಸಚಿವ ಹಾಗೂ ಹಿರಿಯ ಡಿಎಂಕೆ ನಾಯಕ ಕೆ.ಆರ್. ಪೆರಿಯಕರುಪ್ಪನ್ ಅವರು ಕೇವಲ ಒಂದೇ ಒಂದು ಮತದ ಅಂತರದಿಂದ ಪರಾಭವಗೊಂಡಿದ್ದಾರೆ. ಮತ ಎಣಿಕೆಯ ಬಹುತೇಕ ಸುತ್ತುಗಳಲ್ಲಿ ಮುನ್ನಡೆಯಲ್ಲಿದ್ದ ಸಚಿವರಿಗೆ ಅಂತಿಮ ಸುತ್ತು ಭಾರಿ ಹಿನ್ನಡೆ ತಂದುಕೊಟ್ಟು ದೊಡ್ಡ ಅಘಾತವನ್ನೇ ಕೊಟ್ಟಿತು.
ಒಂದೇ ಒಂದು ಮತದಿಂದ ಸೋಲು
ಹಿರಿಯ ನಾಯಕ ಮತ್ತು ಸಚಿವ ಪೆರಿಯಕರುಪ್ಪನ್ ಅವರು 83,364 ಮತಗಳನ್ನು ಪಡೆದುಕೊಂಡಿದ್ದರೆ, ಅವರ ಎದುರಾಳಿ ಶ್ರೀನಿವಾಸ್ ಸೇತುಪತಿ ಅವರು 83,365 ಮತಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಿದರು. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಪೆರಿಯಕರುಪ್ಪನ್ ಅವರೇ ಮುನ್ನಡೆ ಸಾಧಿಸಿದ್ದರು..ಆದರೆ, ಕಡೆಯ ಹಂತದಲ್ಲಿ ಎಲ್ಲವು ಬದಲಾಗಿತ್ತು.
ಮರು ಮತ ಎಣಿಕೆಗೆ ಒತ್ತಾಯ
ಅಂತಿಮ ಸುತ್ತಿನ ಮೊದಲು ಪೆರಿಯಕರುಪ್ಪನ್ ಅವರು 30 ಮತಗಳ ಮುನ್ನಡೆಯಲ್ಲಿದ್ದರು. ಆದರೆ, ಅಂತಿಮದಲ್ಲಿ ಫಲಿತಾಂಶ ಅದಲುಬದಲಾಗಿದ್ದು...ರಾಜಕೀಯ ಇತಿಹಾಸದಲ್ಲಿ ತೀರಾ ಕಡಿಮೆ. ಒಂದೇ ಒಂದು ವೋಟಿನಿಂದ ಪದವಿ ಕಳೆದುಕೊಂಡ ಪೆರಿಯಕರುಪ್ಪನ್ ಅವರು ಅಘಾತಕ್ಕೊಳಗಾಗಿ ಮರು ಎಣಿಕೆಗೆ ಒತ್ತಾಯಿಸಿದರು. ಇನ್ನುಳಿದಂತೆ ಬಿಜೆಪಿಯ ಕೆ.ಸಿ. ತಿರುಮಾರನ್ ಅವರು 29,054 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ತಮಿಳುನಾಡಿನಲ್ಲಿ ವಿಜಯ್ ಮೊದಲ ಬಾರಿಗೆ ಚುನಾವಣೆಗೆ ನಿಂತು, ಭರ್ಜರಿ ಜಯವನ್ನು ಕಂಡಿದ್ದಾರೆ. ಬರೋಬ್ಬರಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಎಂಕೆ 59 ಸ್ಥಾನವನ್ನು ಗೆದ್ದುಕೊಂಡಿದ್ದರೆ, ಎಐಎಡಿಎಂಕೆ 47 ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಕಾಂಗ್ರೆಸ್5 ಸ್ಥಾನಕ್ಕೆ ತೃಪ್ತಿಪಟ್ಟುಕೊಲ್ಳಬೇಕಾಗಿದ್ದು, ಪಿಎಂಕೆ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ, (ಏಜೆನ್ಸೀಸ್).