- ಇಡೀ ದೇಶದಲ್ಲಿ ಕೇರಳದ ದೀಪಕ್ ಸಾವು ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ
- ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್ ಸಾವಿಗೆ ಶರಣಾಗಿರುವುದು ಕಳವಳಕಾರಿಯಾಗಿದೆ
- ಡಿಜಿಟಲ್ ಯುಗದಲ್ಲಿ ವೀವ್ಸ್ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸುತ್ತಿರುವುದು ನಿಜಕ್ಕೂ ಆಘಾತಕಾರಿ
- ಅಮಾಯಕ ದೀಪಕ್ ಅವರ ಜೀವ ತೆಗೆದಿದ್ದಲ್ಲದೇ ಆತನ ವಿರುದ್ಧವೇ ಆರೋಪಿ ದೂರು ದಾಖಲಿಸಿದ್ದಾರೆ
ಕೊಚ್ಚಿ: ಇಡೀ ದೇಶದಲ್ಲಿ ಕೇರಳದ ದೀಪಕ್ ಸಾವು ಪ್ರಕರಣ ( Deepak death Case ) ಸಾಕಷ್ಟು ಸದ್ದು ಮಾಡುತ್ತಿದೆ. ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್ ಸಾವಿಗೆ ಶರಣಾಗಿದ್ದು, ದೇಶದ ಜನೆತಯನ್ನು ಚಿಂತಿಸುವಂತೆ ಮಾಡಿದೆ. ಇಂದಿನ ಡಿಜಿಟಲ್ ಯುಗದಲ್ಲಿ ವೀವ್ಸ್ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸುತ್ತಿರುವುದು ನಿಜಕ್ಕೂ ಆಘಾತಕಾರಿ ವಿಚಾರವಾಗಿದೆ. ತನ್ನ ತಪ್ಪಿನಿಂದ ಓರ್ವ ಅಮಾಯಕನ ಜೀವ ಹೋಗಿದ್ದರು ಕೂಡ ಅದರ ಪಶ್ಚಾತಾಪವಿಲ್ಲದೇ ವರ್ತಿಸುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ ಎನ್ನಬಹುದು.
ಹೌದು, ದೀಪಕ್ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಒಂದು ನಡೆದಿದೆ. ಬಂಧನಕ್ಕೆ ಒಳಗಾಗಿರುವ ಆರೋಪಿ ಶಿಮ್ಜಿತಾ ಮುಸ್ತಫಾ ನಿನ್ನೆ (ಜ.21) ರಾತ್ರಿಯೇ ಪಯ್ಯನ್ನೂರು ಪೊಲೀಸರಿಗೆ ಇಮೇಲ್ ಮೂಲಕ ದೂರು ದಾಖಲಿಸಿದ್ದಾರೆ. ಈ ದೂರಿನ ಕುರಿತು ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.
ದೂರಿನಲ್ಲಿ ಏನಿದೆ?
ಘಟನೆ ನಡೆದ ದಿನ ಬೆಳಗ್ಗೆ ನಾನು ಪಯ್ಯನ್ನೂರು ರೈಲು ನಿಲ್ದಾಣದಿಂದ ಬಸ್ ಹತ್ತಿದೆ. ಪಯ್ಯನ್ನೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಓರ್ವ ವ್ಯಕ್ತಿ ನನ್ನನ್ನು ಅನುಚಿತವಾಗಿ ಮುಟ್ಟಿದನು. ಇದಾದ ನಂತರ, ನಾನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ ಎಂದು ಶಿಮ್ಜಿತಾ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆದರೆ, ದೂರಿನಲ್ಲಿ, ಆ ವ್ಯಕ್ತಿಯ ಗುರುತನ್ನು ಆಕೆ ಬಹಿರಂಗಪಡಿಸಿಲ್ಲ.
ವಡಕರದ ಮುತ್ತುಂಗಲ್ ಪಶ್ಚಿಮದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿದ್ದ ಆರೋಪಿ ಶಿಮ್ಜಿತಾ ಮುಸ್ತಫಾಳನ್ನು ಇಂದು ಕೇರಳ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆಕೆಯನ್ನು ರಿಮಾಂಡ್‌ನಲ್ಲಿ ಇಟ್ಟಿದ್ದಾರೆ. ದೀಪಕ್ ಅವರ ತಾಯಿಯ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಶಿಮ್ಜಿತಾ ತಲೆಮರೆಸಿಕೊಂಡಿದ್ದಳು. ಆಕೆಗೆ ವಿದೇಶಿ ಸಂಪರ್ಕಗಳು ಇದ್ದ ಕಾರಣ ಪೊಲೀಸರು ಶಿಮ್ಜಿತಾ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಆದರೆ, ವಡಕರದಲ್ಲಿದ್ದಾರೆ ಎಂಬ ಸುಳಿವು ದೊರೆತ ನಂತರ ಆಕೆಯನ್ನು ಬಂಧಿಸಲಾಯಿತು.
ಕೊಯಿಲಾಂಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಶಿಮ್ಜಿತಾಳನ್ನು ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಆಕೆಯನ್ನು 14 ದಿನಗಳ ಕಾಲ ವಶಕ್ಕೆ ಪಡೆದು ಮಂಜೇರಿ ಮಹಿಳಾ ಜೈಲಿಗೆ ಕಳುಹಿಸಲಾಗಿದೆ.
ಏನಿದು ಪ್ರಕರಣ?
ಇತ್ತೀಚೆಗೆ, ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಶಿಮ್ಜಿತಾ, ತನಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯಕರವಾಗಿ ಮುಟ್ಟುತ್ತಿದ್ದಾನೆ ಎಂದು ವಿಡಿಯೋ ಮಾಡಿ. ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿ, ವ್ಯಕ್ತಿಗೆ ಅಲ್ಲೇ ಹಿಗ್ಗಾಮುಗ್ಗಾ ಥಳಿಸಬೇಕಿತ್ತು ಎಂಬ ಕಮೆಂಟ್ಗಳಿಂದ ತುಂಬಿತು. ಸಾಕಷ್ಟು ಜನರು, ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು ಎಂದೆಲ್ಲ ಆಕ್ರೋಶ ಹೊರಹಾಕಿದರು. ತನ್ನದೇನು ತಪ್ಪಿಲ್ಲದಿದ್ದರೂ ಸುಖಾಸುಮ್ಮನೆ ನನ್ನನ್ನು ವಿಡಿಯೋದಲ್ಲಿ ತೋರಿಸಿ, ಮಾನ-ಮರ್ಯಾದೆ ಕಳೆದಳು ಎಂದು ದೀಪಕ್, ಮನನೊಂದು ಆತ್ಮಹತ್ಯೆಗೆ ಶರಣಾದರು. ಈ ಘಟನೆ ಸದ್ಯ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪುರುಷರ ಸಂಘ ಕೇರಳದ ಹೈಕೋರ್ಟ್ ಮೆಟ್ಟಿಲು ಸಹ ಹತ್ತಿದೆ, (ಏಜೆನ್ಸೀಸ್).