ಕೇರಳ ಮೂಲದ ದೀಪಕ್​ ಸಾವು ಪ್ರಕರಣ  
ದೇಶ

ವೀವ್ಸ್​​ ಹುಚ್ಚಿಗೆ ಅಮಾಯಕನ ಜೀವ ತೆಗೆದ ಪ್ರಕರಣ: ಪಶ್ಚಾತಾಪವಿಲ್ಲದ ಶಿಮ್ಜಿತಾಗೆ ಶಾಕ್​ ಕೊಟ್ಟ ನ್ಯಾಯಾಲಯ! Deepak Death Case

ಪ್ರಮುಖ ಮುಖ್ಯಾಂಶಗಳು

  • ಇಡೀ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ ಕೇರಳ ಮೂಲದ ದೀಪಕ್​ ಸಾವು ಪ್ರಕರಣ
  • ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್​ ಸಾವಿಗೆ ಶರಣಾದನು
  • ತನ್ನ ವೀವ್ಸ್​ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸಿದ ಆರೋಪಿ ಶಿಮ್ಜಿತಾ ಮುಸ್ತಫಾ
  • ಇದೀಗ ಆರೋಪಿ ಶಿಮ್ಜಿತಾಗೆ ನ್ಯಾಯಾಲಯದಲ್ಲೂ ತೀವ್ರ ಹಿನ್ನಡೆ
ಕೊಚ್ಚಿ: ಕೇರಳ ಮೂಲದ ದೀಪಕ್​ ಸಾವು ಪ್ರಕರಣ ( Deepak death Case ) ಇಡೀ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದು ನಿಮಗೆಲ್ಲರಿಗೂ ಗೊತ್ತಿದೆ. ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್​ ಸಾವಿಗೆ ಶರಣಾದನು. ತನ್ನ ವೀವ್ಸ್​ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸಿದ ಆರೋಪಿ ಶಿಮ್ಜಿತಾ ಮುಸ್ತಫಾ ವಿರುದ್ಧ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಯಿತು. ಇದೀಗ ಶಿಮ್ಜಿತಾಗೆ ನ್ಯಾಯಾಲಯದಲ್ಲೂ ತೀವ್ರ ಹಿನ್ನಡೆ ಉಂಟಾಗಿದೆ.
ಪ್ರಸ್ತುತ ನ್ಯಾಯಾಂಗದ ಬಂಧನದಲ್ಲಿರುವ ಆರೋಪಿ ಶಿಮ್ಜಿತಾ, ಇನ್ನಷ್ಟು ದಿನಗಳ ಕಾಲ ಜೈಲಿನ ಕೋಣೆಯಲ್ಲಿ ಕಾಲ ಕಳೆಯಬೇಕಾಗಿದೆ. ಏಕೆಂದರೆ, ಕುಂದಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ನ್ಯಾಯಾಲಯವು ಪ್ರಾಸಿಕ್ಯೂಷನ್ ವಾದಗಳನ್ನು ಎತ್ತಿಹಿಡಿದಿದೆ. ಸದ್ಯ ಈ ಪ್ರಕರಣ, ತನಿಖೆಯ ಪ್ರಾಥಮಿಕ ಹಂತದಲ್ಲಿದೆ ಮತ್ತು ಈ ಪರಿಸ್ಥಿತಿಯಲ್ಲಿ ಜಾಮೀನು ನೀಡುವುದು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪ್ರಾಸಿಕ್ಯೂಷನ್ ವಾದಿಸಿತು. ಬಸ್ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಬೇಕಾಗಿರುವುದರಿಂದ ಆರೋಪಿಗಳನ್ನು ಬಿಡುಗಡೆ ಮಾಡುವುದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪೊಲೀಸ್ ವರದಿಯಲ್ಲಿ ಸೂಚಿಸಲಾಗಿತ್ತು. ಇದನ್ನು ಪರಿಗಣಿಸಿದ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ.

ಏನಿದು ಪ್ರಕರಣ?

ಇತ್ತೀಚೆಗೆ, ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಶಿಮ್ಜಿತಾ, ತನಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯಕರವಾಗಿ ಮುಟ್ಟುತ್ತಿದ್ದಾನೆ ಎಂದು ವಿಡಿಯೋ ಮಾಡಿ, ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿ, ವ್ಯಕ್ತಿಗೆ ಅಲ್ಲೇ ಹಿಗ್ಗಾಮುಗ್ಗಾ ಥಳಿಸಬೇಕಿತ್ತು ಎಂಬ ಕಮೆಂಟ್​ಗಳಿಂದ ತುಂಬಿತು. ಸಾಕಷ್ಟು ಜನರು, ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು ಎಂದೆಲ್ಲ ಆಕ್ರೋಶ ಹೊರಹಾಕಿದರು. ತನ್ನದೇನು ತಪ್ಪಿಲ್ಲದಿದ್ದರೂ ಸುಖಾಸುಮ್ಮನೆ ನನ್ನನ್ನು ವಿಡಿಯೋದಲ್ಲಿ ತೋರಿಸಿ, ಮಾನ-ಮರ್ಯಾದೆ ಕಳೆದಳು ಎಂದು ದೀಪಕ್, ಮನನೊಂದು ಆತ್ಮಹತ್ಯೆಗೆ ಶರಣಾದರು. ಈ ಘಟನೆ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.

ಮೃತ ದೀಪಕ್​ ವಿರುದ್ಧವೇ ದೂರು

ತನ್ನ ತಪ್ಪಿನಿಂದ ಓರ್ವ ಅಮಾಯಕನ ಜೀವ ಹೋಗಿದ್ದರು ಕೂಡ ಅದರ ಪಶ್ಚಾತಾಪವಿಲ್ಲದೇ ಶಿಮ್ಜಿತಾ ವರ್ತಿಸುತ್ತಿದ್ದಾಳೆ. ಮೃತ ದೀಪಕ್​ ವಿರುದ್ಧವೇ ಆಕೆ ದೂರು ನೀಡಿದ್ದಾಳೆ. ಘಟನೆ ನಡೆದ ದಿನ ಬೆಳಗ್ಗೆ ನಾನು ಪಯ್ಯನ್ನೂರು ರೈಲು ನಿಲ್ದಾಣದಿಂದ ಬಸ್ ಹತ್ತಿದೆ. ಪಯ್ಯನ್ನೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಓರ್ವ ವ್ಯಕ್ತಿ ನನ್ನನ್ನು ಅನುಚಿತವಾಗಿ ಮುಟ್ಟಿದನು. ಇದಾದ ನಂತರ, ನಾನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ ಎಂದು ಶಿಮ್ಜಿತಾ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆದರೆ, ದೂರಿನಲ್ಲಿ, ಆ ವ್ಯಕ್ತಿಯ ಗುರುತನ್ನು ಆಕೆ ಬಹಿರಂಗಪಡಿಸಿಲ್ಲ.

ಆರೋಪಿ ಬಂಧನ

ಕೇರಳದ ವಡಕರದ ಮುತ್ತುಂಗಲ್ ಪಶ್ಚಿಮದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿದ್ದ ಆರೋಪಿ ಶಿಮ್ಜಿತಾ ಮುಸ್ತಫಾಳನ್ನು ಜನವರಿ 22ರಂದು ಕೇರಳ ಪೊಲೀಸರು ಬಂಧಿಸಿದರು. ಸದ್ಯ ಆಕೆಯನ್ನು ರಿಮಾಂಡ್‌ನಲ್ಲಿ ಇಟ್ಟಿದ್ದಾರೆ. ಇದಕ್ಕೂ ಮುನ್ನ ದೀಪಕ್ ಅವರ ತಾಯಿ, ಶಿಮ್ಜಿತಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ, ಶಿಮ್ಜಿತಾ ತಲೆಮರೆಸಿಕೊಂಡಿದ್ದಳು. ಆಕೆಗೆ ವಿದೇಶಿ ಸಂಪರ್ಕಗಳು ಇದ್ದ ಕಾರಣ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಆದರೆ, ವಡಕರದಲ್ಲಿದ್ದಾರೆ ಎಂಬ ಸುಳಿವು ದೊರೆತ ನಂತರ ಆಕೆಯನ್ನು ಬಂಧಿಸಲಾಯಿತು. ಬಳಿಕ, ಕೊಯಿಲಾಂಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಆಕೆಯನ್ನು 14 ದಿನಗಳ ಕಾಲ ಮಂಜೇರಿ ಮಹಿಳಾ ಜೈಲಿಗೆ ಕಳುಹಿಸಲಾಗಿದೆ. ಇದರ ನಡುವೆ ಜಾಮೀನಿಗಾಗಿ ಅರ್ಜಿ ದಾಖಲಿಸಿದ್ದಳು. ಆದರೆ, ಅರ್ಜಿಯನ್ನು ತಿರಸ್ಕರಿಸಲಾಗಿದೆ, (ಏಜೆನ್ಸೀಸ್​).