ನಿಯಮಗಳಲ್ಲಿ ಹೊಸ ಬದಲಾವಣೆಗಳು 
ದೇಶ

ಪಿಂಚಣಿ ಯೋಜನೆ, ಆಧಾರ್ ಕಾರ್ಡ್... ಡಿ.1ರಿಂದ ಒಂದಷ್ಟು ಬದಲಾವಣೆ​! ಇಲ್ಲಿದೆ ನೋಡಿ ವಿವರ

ಮೋಹನ್​ ಶೆಟ್ಟಿ
ನವದೆಹಲಿ: ಇನ್ನೇನು ವರ್ಷದ ಕೊನೆಯ ತಿಂಗಳಿಗೆ ಕೆಲವೇ ದಿನಗಳು ಸನ್ನಿಹಿತ. ಹೀಗಿರುವಾಗಲೇ ಕೇಂದ್ರ ಸರ್ಕಾರದ ಹಲವು ನಿಯಮಗಳಲ್ಲಿ ಒಂದಷ್ಟು ಬದಲಾವಣೆಗಳು ಕಂಡುಬಂದಿವೆ. ಈ ತಿಂಗಳ ಅಂತ್ಯದೊಂದಿಗೆ ಹಲವು ಪ್ರಮುಖ ಯೋಜನೆಗಳಿಗೆ ಗಡುವು ನೀಡಲಾಗಿದ್ದು, ಡೆಡ್​ಲೈನ್​ ಇದೇ ನವೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಇದಕ್ಕೂ ಮೊದಲು ಅವುಗಳನ್ನು ಪೂರ್ಣಗೊಳಿಸುವುದು ಬಹಳ ಮುಖ್ಯವಾಗಿದೆ. ಅಸಲಿಗೆ ಯಾವುದೆಲ್ಲ? ಎಂಬುದರ ಮಾಹಿತಿ ಹೀಗಿದೆ ಗಮನಿಸಿ.

ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)

ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಆಯ್ಕೆ ಮಾಡಲು ಹಣಕಾಸು ಸಚಿವಾಲಯ ಇದೇ ನವೆಂಬರ್ 30 ಕೊನೆಯ ದಿನಾಂಕವೆಂದು ನಿಗದಿಪಡಿಸಿದೆ. ಇದರೊಂದಿಗೆ, ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಈ ದಿನಾಂಕದೊಳಗೆ ಯುಪಿಎಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಗಡುವನ್ನು ಆರಂಭದಲ್ಲಿ ಸೆಪ್ಟೆಂಬರ್ 30 ಎಂದು ಫಿಕ್ಸ್ ಮಾಡಲಾಗಿತ್ತು. ಆದರೆ, ನಂತರದಲ್ಲಿ ನ.30 ರವರೆಗೆ ವಿಸ್ತರಿಸಲಾಯಿತು. ಯುಪಿಎಸ್ ಯೋಜನೆಯು ಎನ್‌ಪಿಎಸ್‌ಗಿಂತ ಭಿನ್ನವಾಗಿದೆ.

ತೆರಿಗೆ ಸಂಬಂಧಿತ ಕಾರ್ಯಗಳಿಗೆ ಲಾಸ್ಟ್​ ಡೇಟ್​

ಅದೇ ರೀತಿ, ತೆರಿಗೆ ಸಂಬಂಧಿತ ಕಾರ್ಯಗಳಿಗೆ ಕೊನೆಯ ದಿನಾಂಕ ನವೆಂಬರ್ 30. ಅಕ್ಟೋಬರ್ 2025ರಲ್ಲಿ ಕಡಿತಗೊಳಿಸಲಾದ ಟಿಡಿಎಸ್‌ಗೆ, ಸೆಕ್ಷನ್ 194-IA, 194-IB, 194M, 194S ಅಡಿಯಲ್ಲಿ ಹೇಳಿಕೆಗಳನ್ನು ಸಲ್ಲಿಸಲು ಕಡೆಯ ದಿನಾಂಕ ನ.30. ಸೆಕ್ಷನ್ 92E ಅಡಿಯಲ್ಲಿ ವರದಿಗಳನ್ನು ಸಲ್ಲಿಸಬೇಕಾದ ತೆರಿಗೆದಾರರು ನ.30ರೊಳಗೆ ತಮ್ಮ ಐಟಿಆರ್ ಅನ್ನು ಸಲ್ಲಿಸಬೇಕು. ಎನ್​ಟಿಟಿಗೆ ಫಾರ್ಮ್ 3CEAA ಸಲ್ಲಿಸಲು ಕೊನೆಯ ದಿನಾಂಕ ನ.30 ಎಂದು ತಿಳಿಸಲಾಗಿದೆ.

ಜೀವನ ಪ್ರಮಾಣಪತ್ರ ಸಲ್ಲಿಕೆ

ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30. ನಿಮ್ಮ ಮನೆಯಲ್ಲಿ ಯಾರಾದರೂ ಪಿಂಚಣಿ ಪಡೆಯುತ್ತಿದ್ದರೆ, ಈ ಗಡುವಿನೊಳಗೆ ಅವರು ಸರ್ಟಿಫಿಕೆಟ್​ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಸರ್ಜಿ ಸಲ್ಲಿಸುವರು ನೆನಪಿಡಿ.

ಎಲ್‌ಪಿಜಿ ಗ್ಯಾಸ್ ಸಿಲಿಂಡರ್

ಪ್ರತಿ ತಿಂಗಳಂತೆ, ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಬದಲಾಯಿಸಬಹುದು. ಇದರಲ್ಲಿ ಏರಿಕೆ, ಇಳಿಕೆ ಹೇಗೆ ಎಂಬುದನ್ನು ಕಾದು ನೋಡಬೇಕಿದೆ.

ಯುಐಡಿಎಐ ಆಧಾರ್ ಕಾರ್ಡ್

ಆಧಾರ್ ಕಾರ್ಡ್‌ಗೆ ಬದಲಾವಣೆಗಳನ್ನು ಯುಐಡಿಎಐ ಪರಿಗಣಿಸುತ್ತಿದೆ. ಕಾರ್ಡ್‌ನಲ್ಲಿ ಫೋಟೋ ಮತ್ತು ಕ್ಯೂಆರ್ ಕೋಡ್ ಮಾತ್ರ ಇರಬೇಕು. ಉಳಿದ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿರಬೇಕು ಎಂಬ ನಿಬಂಧನೆಯನ್ನು ಇದು ಒಳಗೊಂಡಿರಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ,(ಏಜೆನ್ಸೀಸ್).