Sanjay Raut | ರಾಜ್ಯಸಭಾ ಸದಸ್ಯ ಸಂಜಯ್ ರಾವತ್ 
ದೇಶ

ಅಜಿತ್ ಪವಾರ್ ಚಿತೆ ಆರುವ ಮೊದಲೇ ಅಧಿಕಾರದ ಚರ್ಚೆ..ಎನ್‌ಸಿಪಿ ನಾಯಕರ ವಿರುದ್ಧ ರಾವುತ್ ಕಿಡಿ | Sanjay Raut

ಮುಂಬೈ: ಅಜಿತ್ ಪವಾರ್ ಅವರ ದುರಂತ ಸಾವಾಗಿ ಇನ್ನು ವಾರ ಕೂಡ ಆಗಿಲ್ಲ, ಹೀಗಿದ್ದಾಗ ಅವರ ಉತ್ತರಾಧಿಕಾರಿಯ ಬಗ್ಗೆ ಮಾತನಾಡುವುದು ಅಮಾನವೀಯ ಎಂದು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕಿಡಿ ಕಾರಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡುವುದು ಅಮಾನವೀಯ, ಅದು ಮಂತ್ರಿಗಳಾಗಲಿ ಅಥವಾ ಶಾಸಕರಾಗಲಿ. ಅಜಿತ್ ದಾದಾ ಪತ್ನಿ ಸುನೇತ್ರಾ ತಮ್ಮ ಗಂಡನನ್ನು ಕಳೆದುಕೊಂಡಿದ್ದಾರೆ, ಇಂತಹ ಸಮಯದಲ್ಲಿ ಈ ರೀತಿ ಮಾತನಾಡುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಹೇಳಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಬಾರಾಮತಿಯಿಂದ ಸೋತ ಸುನೇತ್ರಾ ಪವಾರ್ ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿದ್ದು, ಅಜಿತ್​ ದಾದಾ ನಿಧನದ ಬಳಿಕ ಅವರ ಪತ್ನಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಚರ್ಚೆಗಳು ನಡೆಯುತ್ತಿದ್ದು, ಎನ್​​ಸಿಪಿಯನ್ನು ಅವರೇ ಮುನ್ನಡೆಸಬೇಕೆಂದು ಅನೇಕರು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

ದಾದಾ ಇಲ್ಲದೆ ಮಹಾರಾಷ್ಟ್ರ ರಾಜಕೀಯ ಅಪೂರ್ಣ

ಅಜಿತ್​ ಪವಾರ್​ ನಿಧನದ ಬಳಿಕ ಮಾತನಾಡಿದ್ದ ಸಂಸದ ಸಂಜಯ್​ ರಾವತ್​, ದಾದಾ ಅಗಲಿಕೆಯಿಂದ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರನ್ನು ಪ್ರೀತಿಯಿಂದ ದಾದಾ ಎಂದೇ ಕರೆಯುತ್ತಿದ್ದೆವು. ಅವರಿಲ್ಲದೇ ಮಹಾರಾಷ್ಟ್ರದ ರಾಜಕೀಯ ಭೂದೃಶ್ಯವೇ ಅಪೂರ್ಣವಾಗಿದೆ. ಅವರು ಎಂತಹ ಸಂದರ್ಭದಲ್ಲೂ ಜನತೆಯ ಪರವಾಗಿ ನಿಲ್ಲುತ್ತಿದ್ದರು ಎಂದು ಹೇಳಿದ್ದರು.
ವಿಮಾನ ಅಪಘಾತದ ಸುದ್ದಿ ಹೊರ ಬೀಳುತ್ತಿದ್ದಂತೆಯೇ ದಾದಾ ಅವರು ಸುರಕ್ಷಿತವಾಗಿ ಊರಿಗೆ ಬರಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸಿದ್ದೆವು. ಯಾವುದಾದರೂ ಪವಾಡ ನಡೆಯಲಿ, ಅದರಿಂದ ಆದರೂ ಅವರು ಬದುಕಿ ಬರಲಿ ಎಂಬುದು ನಮ್ಮ ಆಶಯವಾಗಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಈ ದುರಂತವನ್ನು ಈವರೆಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ್​ ಭಾವುಕರಾದರು.
ರಾಜಕೀಯದಲ್ಲಿ ನಮ್ಮ ಸಿದ್ಧಾಂತಗಳು ಹಾಗೂ ಅವರ ಸಿದ್ಧಾಂತಗಳು ಬೇರೆಯಾಗಿರಬಹುದು, ಪರಸ್ಪರ ಟೀಕೆಗಳು ವ್ಯಕ್ತವಾಗುತ್ತಿದ್ದವು. ಆದರೆ, ಅಜಿತ್ ಅವರ ಕೆಲಸದ ಶೈಲಿ ಮತ್ತು ಆಡಳಿತಾತ್ಮಕ ಹಿಡಿತದ ಬಗ್ಗೆ ನಮಲ್ಲರಿಗೂ ಹೆಮ್ಮೆಯಿತ್ತು. ಮಹಾರಾಷ್ಟ್ರದ ಇಂಚಿಂಚು ಭೂಮಿಯ ಬಗ್ಗೆ ಮತ್ತು ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಸಂಪೂರ್ಣ ಜ್ಞಾನವಿತ್ತು ಎಂದರು.

ಘಟನೆಯ ಹಿನ್ನಲೆ

ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರ ಸಭೆಗಳು ಬಾರಾಮತಿಯಲ್ಲಿ ನಡೆಯುತ್ತಿರುವ ಹಿನ್ನಲೆ ಅಜಿತ್ ಪವಾರ್ ಬುಧವಾರ (ಜ.28) ಬೆಳಿಗ್ಗೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಾರಾಮತಿಗೆ ತೆರಳುತ್ತಿದ್ದರು. ವಿಮಾನವು ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಾಗ, ಹಠಾತ್ ತಾಂತ್ರಿಕ ದೋಷ ಸಂಭವಿಸಿದೆ. ಪೈಲಟ್ ನಿಯಂತ್ರಣ ಕಳೆದುಕೊಂಡು ವಿಮಾನ ಅಪಘಾತಕ್ಕೀಡಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ಅಜಿತ್​ ಪವಾರ್​ ಸೇರಿದಂತೆ ಎಲ್ಲಾ ಆರು ಮಂದಿ ಪ್ರಯಾಣಿಕರು ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮೂಲಗಳು ದೃಢಪಡಿಸಿವೆ(ಏಜೆನ್ಸೀಸ್​).