ನವದೆಹಲಿ: ಇಷ್ಟು ದಿನ ಸಿನಿಮಾ ನಟರಿಗೆ, ಅದರಲ್ಲೂ ನಟ ಸಲ್ಮಾನ್ ಖಾನ್ ಆಪ್ತರಿಗೆ ಜೀವ ಬೆದರಿಕೆ ಹಾಕುತ್ತಾ, ಅವರ ಮೇಲೆ ಶೂಟೌಟ್ ಮಾಡಿಸುತ್ತಾ ಸುದ್ದಿಯಲ್ಲಿದ್ದ ಬಿಷ್ಣೋಯ್ ಗ್ಯಾಂಗ್, ಈಗ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಜೀಬ ಬೆದರಿಕೆ ಹಾಕಿದೆ ಎಂದು ತಿಳಿದುಬಂದಿದೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ ಬೆನ್ನಲೇ, ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ಗೆ ಬಿಷ್ಣೋಯ್ ಗ್ಯಾಂಗ್ನಿಂದ ಜೀವ ಬೆದರಿಕೆ ಬಂದಿದ್ದು, 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಗಿ ವರದಿಯಾಗಿದೆ.
ವರದಿ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವತಿಯಿಂದ ತಿಲಕ್ ನಗರ ಶಾಸಕ ಜರ್ನೈಲ್ ಸಿಂಗ್ (Jarnail Singh) ಅವರ ಮೊಬೈಲ್ ಫೋನ್ಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಪುತ್ರಿಯನ್ನು ಕೊಲೆ ಮಾಡುವುದಾಗಿ ತಿಳಿಸಿ, 7 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ.
ಈ ಬೆದರಿಕೆ ಸಂದೇಶವನ್ನು ನೋಡಿ ಹೆದರಿದ ಜರ್ನೈಲ್ ಸಿಂಗ್ ಕೂಡಲೇ ಮೊಹಾಲಿಯ ಎಸ್ಎಸ್ಪಿ ಬಳಿ ದೂರನ್ನು ದಾಖಲಿಸಿದ್ದಾಗಿ ತಿಳಿದುಬಂದಿದೆ. ಸದ್ಯ ದೂರನ್ನು ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು, ಈ ಬೆದರಿಕೆಯ ಸತ್ಯಾಸತ್ಯೆಯನ್ನು ಪರಿಶೀಲಿಸುತ್ತಿದ್ದಾಗಿ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಎಂಎಲ್ಎ ಜರ್ನೈಲ್ ಸಿಂಗ್ ನೀಡಿದ ದೂರನ್ನು ಆಧರಿಸಿ, ಸೈಬರ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಸಂದೇಶ ಕಳುಹಿಸಿದ ಮೊಬೈಲ್ ಸಂಖ್ಯೆ ವಿವರ, ಡೇಟಾ, ಇಂರ್ಟನೆಟ್ ಬಳಕೆ, ಲೊಕೇಶನ್ ಮೊದಲಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾಗಿ ತಿಳಿಸಿದ್ದಾರೆ.
ಇನ್ನು ಕೆಲವೇ ತಿಂಗಳುಗಳಲ್ಲಿ ಪಂಜಾಬ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಮ್ ಆದ್ಮಿ ಪಕ್ಷ ತನ್ನ ಅಧಿಕಾರ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭರದಿಂದ ಪ್ರಚಾರ, ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಅವರ ಜೀವಕ್ಕೆ ಅಪಾಯ ಸಂಭವಿಸುವ ಮುನ್ಸೂಚನೆ ದೊರೆತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ, (ಏಜೆನ್ಸೀಸ್).