ಶೇಖ್ ಹಸೀನಾ  
ದೇಶ

ಮದುವೆ ವಾರ್ಷಿಕೋತ್ಸವ ದಿನವೇ ಮರಣದಂಡನೆ ಶಿಕ್ಷೆ! ಮಾಜಿ ಪ್ರಧಾನಿಯ ಹಸ್ತಾಂತರಕ್ಕೆ ಬಾಂಗ್ಲಾ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಶೇಖ್ ಹಸೀನಾ ಪಾಲಿಗೆ ನ.17 ಕರಾಳ ದಿನ
  • ಮೂರು ಆರೋಪಗಳಲ್ಲಿ ಹಸೀನಾ ತಪ್ಪಿತಸ್ಥೆ
  • ವಿವಾಹ ವಾರ್ಷಿಕೋತ್ಸವದಂದೇ...
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ಪಾಲಿಗೆ ನ.17 ಕರಾಳ ದಿನ. ಏಕೆಂದರೆ, ಬಾಂಗ್ಲಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಹಸೀನಾ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಕಾರಣ, ಕಳೆದ ವರ್ಷ ನಡೆದ ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಕ್ರೂರ ಕ್ರಮ ತೆಗೆದುಕೊಂಡ ಆರೋಪ ಅವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ, ಮೂರು ಆರೋಪಗಳಲ್ಲಿ ಹಸೀನಾರನ್ನು ತಪ್ಪಿತಸ್ಥರೆಂದು ಘೋಷಿಸಿ, ಇದೀಗ ಮರಣದಂಡನೆ ಶಿಕ್ಷೆಗೆ ಗುರಿಯಾಗಿಸಿದೆ.

ವಿವಾಹ ವಾರ್ಷಿಕೋತ್ಸವದಂದೇ...

ವಾಸ್ತವವಾಗಿ, ಶೇಖ್ ಹಸೀನಾ ಅವರಿಗೆ ನವೆಂಬರ್ 17 ಸದಾ ಆಳವಾದ ನೆನಪುಗಳಲ್ಲಿ ಒಂದು. ಕಾರಣ, ಈ ದಿನ ಅವರು ಮದುವೆಯಾದ ಒಂದು ಶುಭಘಳಿಗೆ. ಇದೇ ದಿನಾಂಕದಂದು ಖ್ಯಾತ ಭೌತಶಾಸ್ತ್ರಜ್ಞ ಎಂಎ ವಾಜೀದ್ ಮಿಯಾರನ್ನು ಹಸೀನಾ ವಿವಾಹವಾದರು. ಜೀವನದಲ್ಲಿ ಖುಷಿಪಟ್ಟು, ಸಂಭ್ರಮಿಸಿದ ದಿನಾಂಕದಂದೇ ಬಾಂಗ್ಲಾದೇಶದ ನ್ಯಾಯಾಲಯವು ಶೇಖ್ ಹಸೀನಾಗೆ ಮರಣದಂಡನೆ ವಿಧಿಸುವ ಮೂಲಕ ನ.17 ಅನ್ನು ಕರಾಳ ದಿನವನ್ನಾಗಿ ಮಾಡಿದೆ.

ಉದ್ದೇಶಪೂರ್ವಕ?

ಇನ್ನೊಂದೆಡೆ, ಬಾಂಗ್ಲಾ ನ್ಯಾಯಾಲಯವು ಉದ್ದೇಶಪೂರ್ವಕವಾಗಿಯೇ ಈ ದಿನಾಂಕವನ್ನು ಆಯ್ಕೆ ಮಾಡಿತೇ? ಎಂಬ ಪ್ರಶ್ನೆ ಸದ್ಯ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ, ವಿಚಾರಣೆ ಪೂರ್ಣಗೊಂಡ ನಂತರ, ಐಸಿಟಿ ನವೆಂಬರ್ 13ರಂದು ತೀರ್ಪು ಘೋಷಿಸುವುದಾಗಿ ತಿಳಿಸಿತು. ಆದಾಗ್ಯೂ, ದಿನಾಂಕವನ್ನು ಇದ್ದಕ್ಕಿದ್ದಂತೆ ನವೆಂಬರ್ 17ಕ್ಕೆ ಬದಲಾಯಿಸಲಾಯಿತು. ಈ ಬದಲಾವಣೆಯು ರಾಜಕೀಯ ಕಾರಣಗಳಿಂದಾಗಿದೆಯೇ ಎಂಬುದು ಇತ್ತೀಚಿನ ಚರ್ಚೆಗೆ ನಾಂದಿ ಹಾಡಿದೆ.
ಈ ಬಗ್ಗೆ ಬಾಂಗ್ಲಾದೇಶದ ಜಾಲತಾಣಗಳಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಇದು ಕಾಕತಾಳೀಯ ಅಲ್ಲ! ಹಸೀನಾ ಅವರನ್ನು ವೈಯಕ್ತಿಕವಾಗಿ ಅವಮಾನಿಸುವ ಉದ್ದೇಶ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು, ಇದೊಂದು ದುರದೃಷ್ಟಕರವೇ ಸರಿ ಮತ್ತು ರಾಜಕೀಯ ದ್ವೇಷ ಎಂದು ಹೇಳಿದ್ದಾರೆ.
ಹಸೀನಾ ಅವರ ಪತಿ ವಾಜೀದ್ ಮಿಯಾ
ಶೇಖ್ ಹಸೀನಾ ಅವರ ಪತಿ ಎಂ.ಎ. ವಾಜೀದ್ ಮಿಯಾ ಕೂಡ ಹೋರಾಟದ ಜೀವನವನ್ನು ನಡೆಸಿದವರು. 1963ರಲ್ಲಿ ಅವರು ಪಾಕಿಸ್ತಾನ ಪರಮಾಣು ಶಕ್ತಿ ಆಯೋಗಕ್ಕೆ ಸೇರಿದರು. ಆದರೆ, ಅವರನ್ನು ಕೆಲಸದಿಂದ ಕಿತ್ತುಬಿಸಾಡಲಾಯಿತು. ನಂತರ, 1971ರಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದ ಬಳಿಕ, ಅವರು ಬಾಂಗ್ಲಾ ಪರಮಾಣು ಶಕ್ತಿ ಆಯೋಗಕ್ಕೆ ಸೇರಿಕೊಂಡರು. ವಿಜ್ಞಾನ ಮತ್ತು ರಾಜಕೀಯದ ಕುರಿತು ಹಲವಾರು ಪ್ರಮುಖ ಪುಸ್ತಕಗಳನ್ನು ವಾಜೀದ್​ ಬರೆದಿದ್ದಾರೆ.,(ಏಜೆನ್ಸೀಸ್).