ಆತ್ಮಹತ್ಯೆ ಮಾಡಿಕೊಂಡ ದಂಪತಿ 
ದೇಶ

ಏಕೈಕ ಪುತ್ರನ ಸಾವು ; ಮನನೊಂದು ವರ್ಷಗಳ ಬಳಿಕ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ದಂಪತಿ | Couple suicide

ರಾಯಪುರ್: ಛತ್ತೀಸ್​ಗಢದ ಜಂಜ್​ಗೀರಾ-ಚಂಪಾ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ಅಪಘಾತದಲ್ಲಿ ತಮ್ಮ ಪ್ರೀತಿಯ ಮಗನನ್ನು ಕಳೆದುಕೊಂಡು ಮನನೊಂದಿದ್ದ ದಂಪತಿ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ(Couple suicide) ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಜಂಜ್​ಗೀರಾ-ಚಂಪಾ ಜಿಲ್ಲೆಯ ಧರ್ಡೆ ಎಂಬ ಗ್ರಾಮದಲ್ಲಿ ಭಾನುವಾರ(ಫೆ. 15) ಈ ಘಟನೆ ನಡೆದಿದೆ. ಕೃಷ್ಣ ಪಟೇಲ್(48) ಮತ್ತು ಪತ್ನಿ ರಮಾಬಾಯಿ(47) ಮೃತ ದಂಪತಿ. ಅವರಿಗೆ ಆದಿತ್ಯ ಎಂಬ 21 ವರ್ಷದ ಮಗನಿದ್ದನು. 2024ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಆದಿತ್ಯ ಮೃತಪಟ್ಟಿದ್ದನು. ಅಂದಿನಿಂದ ದಂಪತಿಗಳ ಬಹಳ ದುಃಖಿತರಾಗಿದ್ದರು ಎನ್ನಲಾಗಿದೆ.
ಮಗನ ಸಾವಿನಿಂದ ಮನೆ ಖಾಲಿಯಂತಾಗಿದ್ದರಿಂದ ಮನನೊಂದಿದ್ದ ಅವರು, ಸಂಬಂಧಿಕರು ಮತ್ತು ಸ್ನೇಹಿತರನ್ನು ಹೆಚ್ಚು ಭೇಟಿಯಾಗದೇ ಹೊರಗಿನ ಪ್ರಪಂಚದಿಂದ ದೂರವಾಗಿದ್ದರು ಎನ್ನಲಾಗಿದೆ. ಎರಡು ವರ್ಷಗಳನ್ನು ಹೀಗೆ ಕಳೆದ ನಂತರ ದಂಪತಿಗಳು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಧೀರ್ಘ ನಾಲ್ಕು ಪುಟಗಳ ಡೆತ್​ನೋಟ್ ಬರೆದು, ವಿಡಿಯೋ ಮಾಡಿರುವ ದಂಪತಿ, ಆದಿತ್ಯ ನಮ್ಮ ಜಗತ್ತು. ಅವನಿಲ್ಲದ ಜೀವನ ನಮಗೆ ಅರ್ಥಹೀನವೆನಿಸುತ್ತದೆ. ನಾವು ದೇವರ ಬಳಿಗೆ ಹೋಗುತ್ತಿದ್ದೇವೆ. ನಮ್ಮ ಮಗನಿಲ್ಲದ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ನಮ್ಮ ಸಾವಿನ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ. ದಯವಿಟ್ಟು ನಮಗೆ ಬರಬೇಕಾದ ಹಣ ನನ್ನ ಅಣ್ಣನಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಬರೆದಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).