- ಕೇರಳದಲ್ಲಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ಭಾರಿ ಆತಂಕ ಉಂಟುಮಾಡಿದೆ
- ಮರಣೋತ್ತರ ವರದಿಯನ್ನು ನೋಡಿ ಪೊಲೀಸರೇ ಗೊಂದಲಕ್ಕೀಡಾಗಿದ್ದಾರೆ
- ಗಾಯ ಮತ್ತು ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ಮರಣೋತ್ತರ ವರದಿಯಲ್ಲಿದೆ
- ಬಿಸ್ಕತ್ತು ತಿಂದ ಬಳಿಕ ಮಗು ಕುಸಿದುಬಿತ್ತು ಎಂದು ಪಾಲಕರು ಹೇಳುತ್ತಿದ್ದಾರೆ
ತಿರುವನಂತಪುರಂ: ಕೇರಳದ ನೆಯ್ಯಟ್ಟಿಂಕರದಲ್ಲಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ಭಾರಿ ಆತಂಕ ಉಂಟುಮಾಡಿದೆ. ಮರಣೋತ್ತರ ವರದಿಯಲ್ಲಾದರೂ ( Postmortem report ) ನಿಜಾಂಶ ಗೊತ್ತಾಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದ ಪೊಲೀಸರಿಗೂ ಆಘಾತವಾಗಿದೆ. ಏಕೆಂದರೆ, ಶವಪರೀಕ್ಷೆ ವರದಿಯಲ್ಲೂ ನಿಗೂಢತೆ ಇದೆ.
ಮೃತ ಮಗುವನ್ನು ಇಹಾನ್ (ಅಪ್ಪು) ಎಂದು ಗುರುತಿಸಲಾಗಿದೆ. ಶಿಜಿನ್ ಮತ್ತು ಕೃಷ್ಣಪ್ರಿಯ ದಂಪತಿಯ ಏಕೈಕ ಪುತ್ರ. ನಿನ್ನೆ ರಾತ್ರಿ ಕಾಂಜಿರಾಮ್‌ಕುಲಂನ ತವ್ವಾವಿಲಾದ ಭವನದಲ್ಲಿ ಅನಿರೀಕ್ಷಿತವಾಗಿ ಸಾವಿಗೀಡಾದನು. ಮಗುವಿನ ಹೊಟ್ಟೆಯಲ್ಲಿರುವ ಗಾಯ ಮತ್ತು ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ಮರಣೋತ್ತರ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಬಿಸ್ಕತ್ತು ತಿಂದ ಬಳಿಕ ಮಗು ಕುಸಿದುಬಿತ್ತು ಎಂದು ಪಾಲಕರು ಹೇಳುತ್ತಿದ್ದಾರೆ. ಹೀಗಾಗಿ, ಮಗುವಿನ ಸಾವಿನ ಸುತ್ತ ನಿಗೂಢತೆ ಹಾಗೇ ಮುಂದುವರಿದಿದೆ.
ಪಾಲಕರು ಹೇಳುವ ಪ್ರಕಾರ, ತಂದೆ ಖರೀದಿಸಿದ ಬಿಸ್ಕತ್ತುಗಳನ್ನು ತಿಂದು ಅರ್ಧ ಗಂಟೆಯ ನಂತರ ಮಗು ಇಹಾನ್ ಕುಸಿದು ಬಿದ್ದನು. ತಕ್ಷಣ ಆತನನ್ನು ನೆಯ್ಯಟ್ಟಿಂಕರ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ, ಆತನ ಜೀವವನ್ನು ಉಳಿಸಲಾಗಲಿಲ್ಲ. ಆದರೆ, ಶವಪರೀಕ್ಷೆಯಲ್ಲಿ ಹೊಟ್ಟೆಯಲ್ಲಿ ಗಾಯ ಮತ್ತು ಆಂತರಿಕ ರಕ್ತಸ್ರಾವ ಎಂಬ ವರದಿ ಇದೆ. ಹೀಗಾಗಿ, ಈ ಪ್ರಕರಣ ಗೊಂದಲಮಯವಾಗಿದೆ.
ಇನ್ನು ಮಗುವಿನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಸಾವು ಸಹಜವಲ್ಲ, ಇದರಲ್ಲಿ ಏನೋ ನಿಗೂಢತೆ ಇದೆ ಎಂದು ಮಗುವಿನ ತಾಯಿಯ ಕುಟುಂಬ ಆರೋಪಿಸಿದೆ. ಶಿಜಿನ್ ಮತ್ತು ಕೃಷ್ಣಪ್ರಿಯ ನಡುವೆ ಅನೇಕ ಸಮಸ್ಯೆಗಳಿದ್ದವು. ಅವರಿಬ್ಬರು ಇತ್ತೀಚೆಗೆ ಮತ್ತೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಎಂದು ಸಂಬಂಧಿಕರು ಹೇಳಿದ್ದಾರೆ. ಹೀಗಾಗಿ, ಪೊಲೀಸರಲ್ಲೂ ಅನುಮಾನ ಮೂಡಿದೆ.
ಅಂದಹಾಗೆ, ವಿಚಾರಣೆಯ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ಮಾಹಿತಿ ಸಿಗದ ಕಾರಣ ಮಗುವಿನ ಪಾಲಕರನ್ನು ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ನಂತರ, ಮಗುವಿನ ಮರಣದ ಸಮಯದಲ್ಲಿ ಕುತ್ತಿಗೆಯಲ್ಲಿ ಮೂರು ಮುರಿತಗಳಾಗಿದ್ದವು ಎಂದು ಮರಣೋತ್ತರ ವರದಿಯಿಂದ ತಿಳಿಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮುರಿತ ಹೇಗೆ ಸಂಭವಿಸಿತು ಎಂದು ಪಾಲಕರನ್ನು ಕೇಳಿದಾಗ, ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣ ಭಾರಿ ಗೊಂದಲವನ್ನು ಹುಟ್ಟುಹಾಕಿದೆ, (ಏಜೆನ್ಸೀಸ್).