ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಭೋಪಾಲ್: ಮಧ್ಯಪ್ರದೇಶದ ಇಂದೋರ್ನ ಭಾಗಿರಥೀಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ ಸುಮಾರು 25 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಶನಿವಾರ(ಜ. 17) ಮೃತರ ಕುಟುಂಬಸ್ಥರು ಮತ್ತು ಅನಾರೋಗ್ಯ ಪೀಡಿತರನ್ನು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಇಂದೋರ್ನ ಖಾಸಗಿ ಬಾಂಬೆ ಆಸ್ಪತ್ರೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅವರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ.
ಬಳಿಕ ಘಟನೆ ನಡೆದ ಭಾಗಿರಥೀಪುರ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಮೃತಪಟ್ಟ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ವಿಪಕ್ಷ ನಾಯಕ ಉಮಂಗ್ ಸಿಂಘಾರ್ ಜೊತೆಗಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನಮಗೆ ಸ್ಮಾರ್ಟ್ ಸಿಟಿಗಳನ್ನು ಮಾಡುವ ಭರವಸೆ ನೀಡಲಾಗಿತ್ತು. ಈ ಪ್ರದೇಶದಲ್ಲಿ ಜನರಿಗೆ ಸರಿಯಾದ ಕುಡಿಯುವ ನೀರಿಲ್ಲ. ಕಲುಷಿತ ನೀರು ಸೇವಿಸಿ ಹಲವರು ಸಾವನ್ನಪ್ಪಿದ್ದಾರೆ. ಇದು ಕೇಂದ್ರದ ಸ್ಮಾರ್ಟ್ ಸಿಟಿಗಳ ಹೊಸ ಮಾದರಿ. ಕೇವಲ ಇಂದೋರ್ ಅಷ್ಟೇ ಅಲ್ಲ ಎಲ್ಲಾ ನಗರಗಳಲ್ಲಿ ಇದೆ ಸ್ಥಿತಿ ಇದೆ. ಶುದ್ಧ ನೀರು ಮತ್ತು ಗಾಳಿಯನ್ನು ಒದಗಿಸುವ ಜವಾಬ್ದಾರಿಯಲ್ಲಿ ಸರ್ಕಾರ ವಿಫಲವಾಗಿದೆ. ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).