ಥಾಣೆ: ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಿದರೆ ಪೊಲೀಸರಿಂದ ಬಚಾವಾಗಬಹುದು, ಆದರೆ ತನ್ನದೇ ಆತ್ಮಸಾಕ್ಷಿಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ ಎನ್ನುವುದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಈ ವಿಚಿತ್ರ ಘಟನೆಯೇ ಸಾಕ್ಷಿಯಾಗಿದೆ.
ಸ್ನೇಹಿತನನ್ನೇ ಕೊಂದು ಶವವನ್ನು ಎಸೆದು ಎಸ್ಕೇಪ್ ಆಗಿದ್ದ ಯುವಕನೊಬ್ಬ, ಕನಸಿನಲ್ಲಿ ಸತ್ತ ಸ್ನೇಹಿತ ಪದೇ ಪದೇ ಬಂದು ನಿದ್ದೆಗೆಡಿಸಿದ್ದಕ್ಕೆ ಹೆದರಿ ತಾನಾಗಿಯೇ ಪೊಲೀಸರಲ್ಲಿ ಶರಣಾದ ಘಟನೆ ಥಾಣೆಯಲ್ಲಿ ವರದಿಯಾಗಿದೆ.
ಈ ಶಾಕಿಂಗ್ ಘಟನೆಯು ಡೊಂಬಿವಲಿಯ ಮೊಥಗಾಂವ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ಪ್ರಭು ಕರ್ಕಡೆ ಹಾಗೂ ಆತನ 43 ವರ್ಷದ ಸ್ನೇಹಿತ ಪಲ್ಲವ್ ಅಲಿಯಾಸ್ ವಿಶಾಲ್ ಕದಮ್ ಇಬ್ಬರೂ ಜೊತೆಯಾಗಿ ಕುಳಿತು ಪಾರ್ಟಿ ಮಾಡುತ್ತಿದ್ದರು. ಎಣ್ಣೆ ನಶೆ ಏರುತ್ತಿದ್ದಂತೆ ಇಬ್ಬರ ನಡುವೆ ಸಣ್ಣ ವಿಷಯಕ್ಕೆ ಮಾತಿಗೆ ಮಾತು ಬೆಳೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ, ಸಿಟ್ಟಿನ ಭರದಲ್ಲಿ ಪ್ರಭು ತನ್ನ ಸ್ನೇಹಿತ ವಿಶಾಲ್ನನ್ನು ಹಲ್ಲೆ ಮಾಡಿ ಸ್ಥಳದಲ್ಲೇ ಕೊಂದು ಹಾಕಿದ್ದಾನೆ.
ಸ್ನೇಹಿತ ಹೆಣವಾಗಿ ಬಿದ್ದಿದ್ದನ್ನು ನೋಡಿ ಪ್ರಭು ಬೆಚ್ಚಿಬಿದ್ದಿದ್ದಾನೆ. ಗಾಬರಿಯಿಂದ ಓಡಿಹೋಗಿ ತನ್ನ ಮನೆಯ ಮಾಲೀಕ ಸಂದೇಶ್ ಮಹಾತ್ರೆಯನ್ನು ಸ್ಥಳಕ್ಕೆ ಕರೆತಂದಿದ್ದಾನೆ. ಆಗ ಮನೆ ಮಾಲೀಕ ಪೊಲೀಸರಿಗೆ ದೂರು ನೀಡುವ ಬದಲು, "ಪೊಲೀಸರಿಗೆ ಗೊತ್ತಾದರೆ ನಿನ್ನ ಇಡೀ ಜೀವನ ಜೈಲಲ್ಲೇ ಕಳೆಯಬೇಕಾಗುತ್ತೆ, ನಿನಗಿನ್ನೂ ಮದುವೆ ಕೂಡ ಆಗಿಲ್ಲ, ಹೆಣವನ್ನು ಎಲ್ಲಿಯಾದರೂ ಬಿಸಾಕೋಣ ಬಾ" ಎಂದು ಐಡಿಯಾ ಕೊಟ್ಟಿದ್ದಾನೆ. ಅದರಂತೆ ಇಬ್ಬರೂ ಸೇರಿ ವಿಶಾಲ್ ಮೃತದೇಹವನ್ನು ಒಂದು ಗೋಣಿಚೀಲದಲ್ಲಿ ತುರುಕಿ, ಯಾರೂ ಇಲ್ಲದ ನಿರ್ಜನ ಪ್ರದೇಶದ ಚರಂಡಿ ಪಕ್ಕ ಎಸೆದು, ಏನೂ ತಿಳಿಯದವರಂತೆ ಮನೆಗೆ ಬಂದು ಸುಮ್ಮನಾಗಿದ್ದಾರೆ.
ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ಪ್ರಭುಗೆ ನೆಮ್ಮದಿ ಮಾತ್ರ ಸಿಗಲಿಲ್ಲ. ತಾನು ಕೊಂದ ಸ್ನೇಹಿತ ರಾತ್ರಿ ಕಣ್ಣು ಮುಚ್ಚಿದರೆ ಸಾಕು ಕನಸಿನಲ್ಲಿ ಬಂದು ಅಟ್ಟಾಡಿಸಲು ಶುರುಮಾಡಿದ್ದಾನೆ. ಕಣ್ಣು ಮುಚ್ಚಿದರೂ ವಿಶಾಲ್, ಕಣ್ಣು ತೆರೆದರೂ ವಿಶಾಲ್! ಸತತ 20 ದಿನಗಳ ಕಾಲ ರಾತ್ರಿಯಿಡೀ ನಿದ್ದೆಯಿಲ್ಲದೆ, ಆತಂಕ ಹಾಗೂ ಅಪರಾಧ ಪ್ರಜ್ಞೆಯಿಂದ ಪ್ರಭು ನರಕಯಾತನೆ ಅನುಭವಿಸಿದ್ದಾನೆ. ಕೊನೆಗೆ ಈ ಮಾನಸಿಕ ಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಾಗದೆ, ನೇರವಾಗಿ ಥಾಣೆಯ ಕ್ರೈಮ್ ಬ್ರಾಂಚ್ ಕಚೇರಿಗೆ ಓಡಿಬಂದಿದ್ದಾನೆ.
ಪೊಲೀಸ್ ಕಚೇರಿಗೆ ಬಂದ ಪ್ರಭು, "ನನ್ನಿಂದ ದೊಡ್ಡ ತಪ್ಪಾಗಿದೆ ಸರ್, ನಾನೇ ನನ್ನ ಫ್ರೆಂಡ್ನ ಕೊಲೆ ಮಾಡಿದೆ. ಅವನು ದಿನಾಲೂ ನನ್ನ ಕನಸಿಗೆ ಬಂದು ಹೆದರಿಸುತ್ತಿದ್ದಾನೆ, ನನ್ನನ್ನು ಜೈಲಿಗೆ ಹಾಕಿಬಿಡಿ" ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇದನ್ನು ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ತಕ್ಷಣವೇ ಆತನನ್ನು ವಶಕ್ಕೆ ಪಡೆದ ಪೊಲೀಸರು, ಶವ ಎಸೆದಿದ್ದ ಸ್ಥಳವನ್ನು ಪತ್ತೆಹಚ್ಚಿ, ಕೊಲೆ ಮುಚ್ಚಿಹಾಕಲು ಸಾಥ್ ನೀಡಿದ್ದ ಮನೆ ಮಾಲೀಕ ಸಂದೇಶ್ ಮಹಾತ್ರೆಯನ್ನೂ ಹೆಡೆಮುರಿ ಕಟ್ಟಿದ್ದಾರೆ.
ಪ್ರಸ್ತುತ ವಿಷ್ಣುನಗರ ಪೊಲೀಸರು ಇಬ್ಬರೂ ಆರೋಪಿಗಳನ್ನು ಕಂಬಿ ಹಿಂದೆ ತಳ್ಳಿದ್ದು, ಕೊಲೆಯ ಸಂಪೂರ್ಣ ತನಿಖೆ ಮುಂದುವರಿಸಿದ್ದಾರೆ. ಸದ್ಯ ಈ 'ಭೂತದ ಕಾಟ' ಹಾಗೂ ಅಪರಾಧ ಪ್ರಜ್ಞೆಯ ತಪ್ಪೊಪ್ಪಿಗೆಯ ಕಥೆ ಮಹಾರಾಷ್ಟ್ರದಾದ್ಯಂತ ಭಾರೀ ಸದ್ದು ಮಾಡುತ್ತಿದೆ, (ಏಜೆನ್ಸೀಸ್).