ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್​ ಮೋಹನ್ ನಾಯ್ಡು 
ದೇಶ

ಡಿಸಿಎಂ ಅಜಿತ್ ಪವಾರ್ ವಿಮಾನ ಪತನ ಪ್ರಕರಣ; ಕೇಂದ್ರ ವಿಮಾನಯಾನ ಸಚಿವ ರಾಮ್​ಮೋಹನ್ ನಾಯ್ಡು ಹೇಳಿದ್ದೇನು? | Ram mohan Naidu

ನವದೆಹಲಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಾಥಮಿಕ ಮಾಹಿತಿ ಪ್ರಕಾರ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬೆಳಗಿನ ದಟ್ಟ ಮಂಜು, ಬೆಳಕಿನ ಗೋಚರತೆ ಕಡಿಮೆಯಿದ್ದ ಕಾರಣ ದುರಂತ ಸಂಭವಿಸಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್​ ಮೋಹನ್ ನಾಯ್ಡು ಹೇಳಿದ್ದಾರೆ.
ಘಟನೆಯ ಕುರಿತು ಬಾರಾಮತಿಯಲ್ಲಿ ಮಾತನಾಡಿರುವ ಅವರು, ಅಪಘಾತದ ತನಿಖೆ ನಡೆಸಲು ಡಿಜಿಸಿಎ(ನಾಗರಿಕ ವಿಮಾನಯಾನ ನಿರ್ದೇಶನಾಲಯ) ಮತ್ತು ಎಎಐಬಿ (ವಿಮಾನ ಅಪಘಾತ ತನಿಖಾ ಬ್ಯೂರೋ) ತಂಡಗಳು ಆಗಮಿಸಿವೆ. ಬೆಳಗ್ಗೆ 8.45ರ ಸುಮಾರಿಗೆ ವಿಮಾನ ಲ್ಯಾಂಡಿಂಗ್​ ಆಗಲು ಪ್ರಯತ್ನಿಸುವ ಸಮಯದಲ್ಲಿ ನಿಲ್ದಾಣದಲ್ಲಿ ಬೆಳಕಿನ ಗೋಚರತೆ ಕಳಪೆಯಾಗಿತ್ತು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.
ಲ್ಯಾಂಡಿಂಗ್ ಮೊದಲು, ಎಟಿಸಿ ಪೈಲಟ್ ಅವರನ್ನು ರನ್‌ವೇ ದೃಷ್ಟಿಯಲ್ಲಿದೆಯೇ ಎಂದು ಕೇಳಿತು. ಅವರು ಇಲ್ಲ ಎಂದು ದೃಢಪಡಿಸಿದರು. ಬಳಿಕ ಪೈಲಟ್​ಗೆ ಗೋ ರನ್​ ಸಂದೇಶ ನೀಡಲಾಯಿತು. ಆಗ ಪೈಲಟ್​ ಮತ್ತೊಂದು ಸುತ್ತು ಹಾಕಿದ ಬಳಿಕ ವಿಮಾನವನ್ನು ಆಕಾಶದಲ್ಲಿ ಸುತ್ತಾಡಿಸಿ ಎರಡನೇ ಪ್ರಯತ್ನದಲ್ಲಿ ಲ್ಯಾಂಡಿಂಗ್​ಗೆ ಪ್ರಯತ್ನಿಸಿದಾಗ, ಎಟಿಸಿ ಮತ್ತೆ ಪೈಲಟ್ ಅನ್ನು ಲ್ಯಾಂಡಿಂಗ್‌ಗೆ ರನ್‌ವೇ ಗೋಚರಿಸುತ್ತಿದೆಯೇ ಎಂದು ಕೇಳಿದೆ. ಆಗ ಪೈಲಟ್ ರನ್‌ವೇಯ ಗೋಚರತೆಯನ್ನು ದೃಢಪಡಿಸಿದ್ದು, ಲ್ಯಾಂಡಿಂಗ್​ ಎಟಿಸಿಯಿಂದ ಅನುಮತಿ ಪಡೆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿದೆ ಎಂದು ತಿಳಿಸಿದ್ದಾರೆ.
ಬಾರಾಮತಿ ಒಂದು ಅನಿಯಂತ್ರಿತ ವಾಯುನೆಲೆಯಾಗಿದ್ದು, ಇದು ಮೀಸಲಾದ ವಾಯು ಸಂಚಾರ ನಿಯಂತ್ರಣ ಗೋಪುರವನ್ನು ಹೊಂದಿಲ್ಲ. ವಾಯುನೆಲೆಯಲ್ಲಿನ ಸಂಚಾರ ಮಾಹಿತಿಯನ್ನು ಹತ್ತಿರದ ಹಾರಾಟ ತರಬೇತಿ ಸಂಸ್ಥೆಗಳ ಬೋಧಕರು ಒದಗಿಸುತ್ತಾರೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಕೇಂದ್ರ ಸರ್ಕಾರ ಪಾರದರ್ಶಕ ತನಿಖೆ ನಡೆಸಲಿದೆ. ವಿಎಸ್​ಆರ್ ಏವಿಯೇಷನ್ ಸಂಸ್ಥೆಯ ಮಾಲೀಕರು ವಿಮಾನದ ತಾಂತ್ರಿಕ ವೈಫಲ್ಯವನ್ನು ತಳ್ಳಿಹಾಕಿದ್ದಾರೆ. ವಿಮಾನದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ್ದಾರೆ. ನಮಗೂ ತಿಳಿದಿರುವಂತೆ ಯಾವುದೇ ತಾಂತ್ರಿಕ ವೈಫಲ್ಯ ಇರಲಿಲ್ಲ ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಇಂದು(ಜ. 28) ಬೆಳಗ್ಗೆ ಬಾರಾಮತಿ ಏರ್​ಪೋರ್ಟ್​ನಲ್ಲಿ ಪತನವಾಗಿದ್ದು, ಡಿಸಿಎಂ ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಖಾಸಗಿ ಸಂಸ್ಥೆ ವಿಎಸ್ಆರ್ ಏವಿಯೇಷನ್ ​​ನಿರ್ವಹಿಸುವ ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನವು ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದಾಗ, ರನ್‌ವೇ ಬಳಿಯ ತೆರೆದ ಮೈದಾನದಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ (ಏಜೆನ್ಸೀಸ್).