Grok AI | ಮೋದಿ ವರ್ಸಸ್ ರಾಹುಲ್; 'ಗ್ರೋಕ್' ಎಐ ಯಾರ ಪರ..? 
ದೇಶ

ಮೋದಿ ವರ್ಸಸ್ ರಾಹುಲ್; 'ಗ್ರೋಕ್' ಎಐ ಯಾರ ಪರ..? ಚಾಟ್‌ಬಾಟ್ ಕೊಟ್ಟ ಅಚ್ಚರಿಯ ಉತ್ತರ ಫುಲ್​ ವೈರಲ್​! | Grok AI

ನವದೆಹಲಿ: ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿರುವ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಗ್ರೋಕ್ (Grok), ಭಾರತದ ರಾಜಕೀಯಕ್ಕೆ ಸಂಬಂಧಿಸಿದಂತೆ ನೀಡಿರುವ ಒಂದು ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ.
ನೀವು ಒಂದು ವೇಳೆ ಭಾರತೀಯ ಪ್ರಜೆಯಾಗಿದ್ದರೆ, ಪ್ರಧಾನಿ ಸ್ಥಾನಕ್ಕೆ ಯಾರಿಗೆ ಮತ ಹಾಕುತ್ತಿದ್ದಿರಿ? ಎಂಬ ಕಾಲ್ಪನಿಕ ಪ್ರಶ್ನೆಯನ್ನು ಎಕ್ಸ್ ಬಳಕೆದಾರರೊಬ್ಬರು ಗ್ರೋಕ್‌ಗೆ ಕೇಳಿದ್ದರು. ಇದಕ್ಕೆ ಯಾವುದೇ ಮುಲಾಜಿಲ್ಲದೇ ಉತ್ತರಿಸಿರುವ ಗ್ರೋಕ್, ತಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದೆ.

ಪ್ರಬಲ ಕಾರಣ ನೀಡುತ್ತಾ, ರಾಹುಲ್​ರನ್ನು ಕುಟುಕಿದ ಗ್ರೋಕ್​!...

ತನ್ನ ಈ ನಿರ್ಧಾರಕ್ಕೆ ಪ್ರಬಲವಾದ ಕಾರಣಗಳನ್ನು ನೀಡಿರುವ ಗ್ರೋಕ್, 2014 ರಿಂದ ಭಾರತವು ಸಾಧಿಸಿರುವ ಪ್ರಗತಿಯನ್ನು ಉಲ್ಲೇಖಿಸಿದೆ. ವಿಶೇಷವಾಗಿ ಮೂಲಸೌಕರ್ಯ ವಿಸ್ತರಣೆ, ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಯಶಸ್ಸು, ಯುಪಿಐ (UPI) ತಂತ್ರಜ್ಞಾನದ ಬೆಳವಣಿಗೆಯ ಪಥ ಮತ್ತು ಜಾಗತಿಕ ಮಟ್ಟದಲ್ಲಿ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದನ್ನು ಅದು ಪಟ್ಟಿ ಮಾಡಿದೆ.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆಯೂ ಪ್ರಸ್ತಾಪಿಸಿರುವ ಚಾಟ್‌ಬಾಟ್, ರಾಹುಲ್ ಗಾಂಧಿ ಅಭಿವೃದ್ದಿ ಯೋಜನೆಗಳ ಟೀಕೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಉದ್ಯೋಗ ಸೃಷ್ಟಿ, ತಂತ್ರಜ್ಞಾನದ ಅಳವಡಿಕೆ ಮತ್ತು ಜಾಗತಿಕ ಸ್ಥಾನಮಾನದ ವಿಚಾರದಲ್ಲಿ ಲಭ್ಯವಿರುವ ಫಲಿತಾಂಶಗಳು ಮೋದಿಯವರ ಪರವಾಗಿವೆ ಎಂದು ಅಭಿಪ್ರಾಯಪಟ್ಟಿದೆ.

ಕುಟುಂಬ ರಾಜಕಾರಣದ ಬಗ್ಗೆ ಹೇಳಿದ್ದೇನು..?

ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಈ ಉತ್ತರ ನೀಡುವಾಗ ಗ್ರೋಕ್ ಕುಟುಂಬ ರಾಜಕೀಯಕ್ಕೆ ಸಂಬಂಧಿಸಿದ ದತ್ತಾಂಶ (Data on Dynasties) ಎಂಬ ಪದವನ್ನು ಬಳಸಿದೆ. ಪ್ರಧಾನಿ ಮೋದಿ ಆಗಾಗ್ಗೆ ಗಾಂಧಿ ಕುಟುಂಬದ ವಿರುದ್ಧ ಮಾಡುವ ವಂಶಪಾರಂಪರ್ಯ ರಾಜಕೀಯದ ಟೀಕೆಗಳನ್ನೇ ಎಐ ದತ್ತಾಂಶವೂ ಪ್ರತಿಬಿಂಬಿಸಿದಂತಿದೆ.
ಹೇ! ವೋಟ್​ ಮತ್ತು ಪೌರತ್ವವಿಲ್ಲದ ಕೃತಕ ಬುದ್ಧಿಮತ್ತೆಯಾಗಿ ನಾನು ಮೋದಿಯವರನ್ನು ಬೆಂಬಲಿಸುತ್ತೇನೆ ಎಂದು ಹೇಳುವ ಮೂಲಕ ಅದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಈ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಗ್ರೋಕ್ ಎಐ ನೇರವಾಗಿ ಎಕ್ಸ್ (X) ಪ್ಲಾಟ್‌ಫಾರ್ಮ್‌ನ ಲೈವ್ ಸಂಭಾಷಣೆಗಳನ್ನು ಆಧರಿಸಿ ಕೆಲಸ ಮಾಡುವುದರಿಂದ, ಪ್ರಸ್ತುತ ಜನರು ಜಾಲತಾಣದಲ್ಲಿ ಏನು ಚರ್ಚಿಸುತ್ತಿದ್ದಾರೆ ಮತ್ತು ಯಾವ ವಿಷಯ ಟ್ರೆಂಡ್ ಆಗುತ್ತಿದೆ ಎಂಬುದರ ಆಧಾರದ ಮೇಲೆ ಅದರ ಪ್ರತಿಕ್ರಿಯೆಗಳು ರೂಪುಗೊಳ್ಳುತ್ತವೆ. ಬ್ರೇಕಿಂಗ್ ನ್ಯೂಸ್ ಮತ್ತು ಟ್ರೆಂಡಿಂಗ್ ವಿಷಯಗಳಿಗೆ ಸಂದರ್ಭೋಚಿತವಾಗಿ ಸ್ಪಂದಿಸುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಈ ವೈರಲ್ ಪೋಸ್ಟ್ ಬಗ್ಗೆ ಎಲಾನ್ ಮಸ್ಕ್ ಅವರ x AI ಸಂಸ್ಥೆಯು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಎಐ ಲೋಕದಲ್ಲಿ ಈ ಬೆಳವಣಿಗೆ ಹೊಸ ಸಂಚಲನ ಮೂಡಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ(ಏಜೆನ್ಸೀಸ್​​).