ಈ ದುರ್ಘಟನೆಗೆ ಕಾರಣವಾಯ್ತಾ ಆ ಒಂದು ಪ್ರಕಟಣೆ...?  
ದೇಶ

ಮಳೆ, ಕತ್ತಲು....ಕೋಲ್ಕತ್ತಾದ ಈ ದುರ್ಘಟನೆಗೆ ಕಾರಣವಾಯ್ತಾ ಆ ಒಂದು ಪ್ರಕಟಣೆ...? | Kolkata Stampede

Kolkata Stampede: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ದುರ್ಗಾ ಪೂಜೆಯ ಸಂಭ್ರಮವು ಕರಾಳ ದುರಂತವಾಗಿ ಬದಲಾಗಿದೆ. ಹಬ್ಬದ ಏಳನೇ ದಿನವಾದ ಸಪ್ತಮಿಯ ಸಂಜೆ ಉತ್ತರ ಕೊಲ್ಕತ್ತಾದ ಪ್ರಸಿದ್ಧ ಚೋರ್‌ಬಗಾನ್ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 19 ಜನರು ದುರ್ಮರಣಕ್ಕೀಡಾಗಿದ್ದಾರೆ.

Kolkata Stampede: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ದುರ್ಗಾ ಪೂಜೆಯ ಸಂಭ್ರಮವು ಕರಾಳ ದುರಂತವಾಗಿ ಬದಲಾಗಿದೆ. ಹಬ್ಬದ ಏಳನೇ ದಿನವಾದ ಸಪ್ತಮಿಯ ಸಂಜೆ ಉತ್ತರ ಕೊಲ್ಕತ್ತಾದ ಪ್ರಸಿದ್ಧ ಚೋರ್‌ಬಗಾನ್ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 19 ಜನರು ದುರ್ಮರಣಕ್ಕೀಡಾಗಿದ್ದಾರೆ. ಸಾವನ್ನಪ್ಪಿದವರಲ್ಲಿ 13 ಜನ ಮಹಿಳೆಯರು ಹಾಗೂ ಒಬ್ಬ ಮಗು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ದುರ್ಘಟನೆಯಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲ್ಕತ್ತಾ ಪೊಲೀಸರ ಅಧಿಕೃತ ಮಾಹಿತಿಯ ಪ್ರಕಾರ, ಶನಿವಾರ ಸಂಜೆ 7.40ರ ಸುಮಾರಿಗೆ ಗಿರೀಶ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚೋರ್‌ಬಗಾನ್ ಪೆಂಡಾಲ್‌ನ ನಿರ್ಗಮನ ದ್ವಾರದಲ್ಲಿ ಈ ಕಾಲ್ತುಳಿತ ಸಂಭವಿಸಿದೆ. ಹಠಾತ್ ಸುರಿದ ಭಾರಿ ಮಳೆಯಿಂದ ರಕ್ಷಣೆ ಪಡೆಯಲು ಮತ್ತು ಒಳಗೆ ನುಗ್ಗಲು ಮುಗಿಬಿದ್ದ ಬೃಹತ್ ಜನಸಂದಣಿಯೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ. ಪೆಂಡಾಲ್‌ನ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ಅತ್ಯಂತ ಕಿರಿದಾಗಿದ್ದುದು ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ತೆಗೆದುಕೊಂಡು ಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:‘ಅಂದು ದೇಶಪ್ರಿಯ ಪಾರ್ಕ್, ಇಂದು ಚೋರ್‌ಬಗಾನ್: 11 ವರ್ಷಗಳಾದರು ಎಚ್ಚೆತ್ತುಕೊಳ್ಳದ ವ್ಯವಸ್ಥೆಗೆ ಬಲಿಯಾಗಿದ್ದು ಅಮಾಯಕರು! | Kolkata Stampede

ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಮಗಳು ಹಾಗೂ ಮೊಮ್ಮಗಳ ಸಂಕಷ್ಟದ ಕುರಿತು ಮಾತನಾಡಿದ ವ್ಯಕ್ತಿಯೊಬ್ಬರು ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರಗಳು ಅತ್ಯಂತ ಕಿರಿದಾಗಿದ್ದವು. ಅಲ್ಲದೆ, ಅಲ್ಲಿ ಯಾವುದೇ ದೀಪದ ವ್ಯವಸ್ಥೆಯಿರಲಿಲ್ಲ. ಕತ್ತಲು ತುಂಬಿದ್ದ ಕಾರಣ ಜನರು ಕಾಲು ಜಾರಿ ಬಿದ್ದರು. ಒಳಗೆ ಬರಲು ಮುಗಿಬಿದ್ದವರ ಒತ್ತಡದಿಂದಾಗಿ ದೊಡ್ಡ ಮಟ್ಟದ ನೂಕುನುಗ್ಗಲು ಉಂಟಾಯಿತು. ಆ ಸಮಯದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಅಥವಾ ಸ್ವಯಂಸೇವಕರು ಅಲ್ಲಿ ಇರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮಾತನಾಡಿ, ಆಯೋಜಕರು ಮೈಕ್‌ನಲ್ಲಿ ಮಾಡಿದ ಒಂದು ಪ್ರಕಟಣೆಯು ಜನರ ನಡುವೆ ಗೊಂದಲ ಹಾಗೂ ನುಗ್ಗಾಟಕ್ಕೆ ಕಾರಣವಾಯಿತು, ಇದು ಈ ಘಟನೆಗೆ ದಾರಿ ಮಾಡಿಕೊಟ್ಟಿತು ಎಂದು ತಿಳಿಸಿದ್ದಾರೆ.

ಪೊಲೀಸರು ಮತ್ತು ರಕ್ಷಣಾ ಪಡೆಗಳು ತಕ್ಷಣ ಕಾರ್ಯಪ್ರವೃತ್ತವಾಗಿ ಗಾಯಾಳುಗಳನ್ನು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಿವೆ. ಕಂಟ್ರೋಲ್ ರೂಮ್, ಅಗ್ನಿಶಾಮಕ ದಳ, ಕೊಲ್ಕತ್ತಾ ಪೊಲೀಸ್ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದು, ಸಾರ್ವಜನಿಕರ ಪ್ರವೇಶಕ್ಕಾಗಿ ಪೆಂಡಾಲ್ ಅನ್ನು ತಕ್ಷಣವೇ ಮುಚ್ಚಲಾಗಿದೆ.

ರಾಜಕೀಯ ನಾಯಕರುಗಳು ಹೇಳೋದೇನು..?

ಈ ಭೀಕರ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿರುವ ಅವರು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯವನ್ನು ಒದಗಿಸುತ್ತಿದೆ ಎಂದು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸಹ ಕೊಲ್ಕತ್ತಾದಲ್ಲೇ ಇದ್ದು, ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ. ಮತ್ತೊಂದೆಡೆ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕೊಲ್ಕತ್ತಾ ಪೊಲೀಸ್ ಮತ್ತು ಸರ್ಕಾರದ ವೈಫಲ್ಯವನ್ನು ಕಟುವಾಗಿ ಟೀಕಿಸಿದ್ದಾರೆ(ಏಜೆನ್ಸೀಸ್​).