ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ ದಲಿತ ವರನ ಮೇಲೆ ಹಲ್ಲೆ  WEB
ದೇಶ

ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ ದಲಿತ ವರನ ಮೇಲೆ ಹಲ್ಲೆ ಮೂವರ ಬಂಧನ ! Agra

ಮದುವೆಯ ಸಂಭ್ರಮದಲ್ಲಿದ್ದ ದಲಿತ ವರನ ಮೇಲೆ ಹಾಡುಗಳ ವಿಚಾರವಾಗಿ ಗುಂಪೊಂದು ಹಲ್ಲೆ ನಡೆಸಿರುವ ಆರೋಪ ಉತ್ತರ ಪ್ರದೇಶದ ಆಗ್ರಾದಲ್ಲಿ ಕೇಳಿಬಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತ ಹಾಡುಗಳನ್ನು ಡಿಜೆ ಮೂಲಕ ಪ್ರಸಾರ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸ್ಥಳೀಯರು, ಮದುವೆ ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 25 ಮಂದಿ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ಗಳಿಂದ ಅತಿಥಿಗಳ ಮೇಲೆ ಹಲ್ಲೆ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ.Agra

ಆಗ್ರಾ: ಮದುವೆಯ ಸಂಭ್ರಮದಲ್ಲಿದ್ದ ದಲಿತ ವರನ ಮೇಲೆ ಹಾಡುಗಳ ವಿಚಾರವಾಗಿ ಗುಂಪೊಂದು ಹಲ್ಲೆ ನಡೆಸಿರುವ ಆರೋಪ ಉತ್ತರ ಪ್ರದೇಶದ ಆಗ್ರಾದಲ್ಲಿ ಕೇಳಿಬಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತ ಹಾಡುಗಳನ್ನು ಡಿಜೆ ಮೂಲಕ ಪ್ರಸಾರ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸ್ಥಳೀಯರು, ಮದುವೆ ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 25 ಮಂದಿ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ಗಳಿಂದ ಅತಿಥಿಗಳ ಮೇಲೆ ಹಲ್ಲೆ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ.

ನವೆಂಬರ್ 26ರ ರಾತ್ರಿ ಜಗ್ನೇರ್ ಪೊಲೀಸ್ ಠಾಣೆ ವ್ಯಾಪ್ತಿಯ ನಗ್ಲಾ ವೀರ್‌ಭಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಮಲ್ಪುರ ಪ್ರದೇಶದಿಂದ ಬಂದಿದ್ದ ವರ ಪರಿಮಲ್ ಸಿಂಗ್, ಸಂಪ್ರದಾಯದಂತೆ ಕುದುರೆ ಮೇಲೆ ಕುಳಿತು ಮದುವೆ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಮೆರವಣಿಗೆಯು ವಧುವಿನ ಮನೆಯ ಸಮೀಪ, ಸುಮಾರು 100 ಮೀಟರ್ ದೂರದಲ್ಲಿದ್ದಾಗ ಕೆಲ ಗ್ರಾಮಸ್ಥರು ಡಿಜೆ ಸಂಗೀತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ಸಂಗೀತದ ವಿಚಾರವಾಗಿ ಶುರುವಾದ ವಾಗ್ವಾದ ಬಳಿಕ ವಿಕೋಪಕ್ಕೆ ತಿರುಗಿದೆ. ಮೆರವಣಿಗೆಯಲ್ಲಿದ್ದವರ ವಿರುದ್ಧ ಜಾತಿ ನಿಂದನೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಬಳಿಕ ಗುಂಪು ವರನನ್ನು ಕುದುರೆಯಿಂದ ಕೆಳಗಿಳಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಮದುವೆಗೆ ಬಂದಿದ್ದ ಅತಿಥಿಗಳ ಮೇಲೆಯೂ ದೊಣ್ಣೆ ಹಾಗೂ ರಾಡ್‌ಗಳಿಂದ ಹಲ್ಲೆ ನಡೆಸಲಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ, ಮೆರವಣಿಗೆಯಲ್ಲಿದ್ದ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಸಿದುಕೊಂಡು ನೆಲಕ್ಕೆ ಎಸೆದು ಕಾಲಿನಿಂದ ತುಳಿಯಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

8 ಮಂದಿ ವಿರುದ್ಧ ಎಫ್‌ಐಆರ್ ದಾಖಲು

ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ಎಂಟು ಮಂದಿ ಹೆಸರಿನೊಂದಿಗೆ ಹಾಗೂ ಇತರ ಕೆಲವು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (SC/ST Act) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಗಲಭೆ, ಅಕ್ರಮ ಗುಂಪುಗೂಡುವಿಕೆ, ಹಲ್ಲೆ, ಅಕ್ರಮವಾಗಿ ತಡೆಹಿಡಿಯುವುದು ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆಗ್ರಾದ ಹೆಚ್ಚುವರಿ ಪೊಲೀಸ್ ಆಯುಕ್ತ ಸಚೀಂದ್ರ ಪಟೇಲ್ ಮಾಹಿತಿ ನೀಡಿದ್ದು, ಶನಿವಾರದಂದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಜಗ್ನೇರ್ ಪೊಲೀಸ್ ಠಾಣೆಯ ಸಿಬ್ಬಂದಿ ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಪೊಲೀಸ್ ಭದ್ರತೆಯಲ್ಲಿಯೇ ಮದುವೆಯ ಉಳಿದ ಶಾಸ್ತ್ರಗಳನ್ನು ಪೂರ್ಣಗೊಳಿಸಲಾಗಿದೆ.