ದೇಶದಲ್ಲಿ ಗ್ಯಾಸ್ ಸಿಲಿಂಡರ್ಗಳ ಅಭಾವ
- ಮಧ್ಯಪ್ರಾಚ್ಯ ಯುದ್ಧದಿಂದ ದೇಶದಲ್ಲಿ ತೈಲ ಬಿಕ್ಕಟ್ಟು
- ಅನಿಲ ಕೊರತೆಯಿಲ್ಲ ಎಂದರೂ ಭಾರತದಲ್ಲಿ ಎಲ್ಪಿಜಿ ಅಭಾವ
- ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್ಗಳ ಕೊರತೆ ಬೆನ್ನಲ್ಲೇ ಬ್ಲ್ಯಾಕ್ ಮಾರ್ಕೆಟ್ಗೆ ಡಿಮಾಂಡ್
ನವದೆಹಲಿ: ಅತ್ತ ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಯುದ್ಧ ದಾಳಿಗಳು ನಿಲ್ಲುತ್ತಿಲ್ಲ. ಇತ್ತ, ದೇಶದಲ್ಲಿ ಅನಿಲ ಕೊರತೆಯಿಂದ ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್ಗಳ ಅಭಾವ ಜನರಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ಈ ಗ್ಯಾಸ್ ಸಿಲಿಂಡರ್ಗಳು ಸರಿಯಾಗಿ ಸಿಗದ ಹಿನ್ನೆಲೆ ಹೋಟೆಲ್ ಉದ್ಯಮವನ್ನೇ ನಂಬಿದವರಿಗೆ ಭಾರೀ ಸಂಕಷ್ಟ ಎದುರಾಗಿದೆ. ಇನ್ನು ಗೃಹಬಳಕೆ ಸಿಲಿಂಡರ್ ಬುಕ್ ಮಾಡುತ್ತಿರುವ ಜನರಿಗೆ ನಿಗದಿ ಪಡಿಸಿರುವ ಸಮಯಕ್ಕೂ ಪೂರೈಕೆ ಆಗುತ್ತಿಲ್ಲ. ಇದು ಜನಸಾಮಾನ್ಯರನ್ನು ಅಕ್ಷರಶಃ ಕಂಗಾಲಾಗಿಸಿದ್ದು, ಬ್ಲ್ಯಾಕ್ ಮಾರ್ಕೆಟ್ನತ್ತ ದೌಡಾಯಿಸುವಂತೆ ಮಾಡಿದೆ.
ತೈಲ ಬಿಕ್ಕಟ್ಟು ಜನರಿಗೆ ಇಕ್ಕಟ್ಟು
ದೇಶಾದ್ಯಂತ ಪೂರೈಕೆ ಬಿಕ್ಕಟ್ಟು ಸುಮಾರು ಐದನೇ ಒಂದು ಭಾಗದಷ್ಟು ಮನೆಗಳನ್ನು ಬ್ಲ್ಯಾಕ್ ಮಾರ್ಕೆಟ್ ಕದ ತಟ್ಟುವಂತೆ ಮಾಡಿದೆ. ಹೊಸದಾಗಿ ಹೆಚ್ಚಳ ಕಂಡ ದರಕ್ಕಿಂತ ಡಬಲ್ ಅಲ್ಲ ತ್ರಿಬಲ್ ಹಣಕ್ಕೆ ಗ್ಯಾಸ್ ಸಿಲಿಂಡರ್ಗಳು ಮಾರಾಟ ಆಗುತ್ತಿದೆ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಹೊಸ ಸಮೀಕ್ಷೆ ತಿಳಿಸಿದ್ದಾಗಿ 'ಎನ್ಡಿಟಿವಿ' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ವಾರ ಶೇ.68ರಷ್ಟು ಕುಟುಂಬಗಳು ಗ್ಯಾಸ್ ಸಿಲಿಂಡರ್ಗಳ ಡೆಲಿವರಿಯಲ್ಲಿ ನಿಗದಿಗಿಂತ ಹೆಚ್ಚು ವಿಳಂಬ ಅನುಭವಿಸಿವೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಇದೇ ಒಂದು ವಾರದ ಹಿಂದೆ ಶೇ.57ರಷ್ಟಿತ್ತು ಎನ್ನಲಾಗಿದೆ. ಪ್ರಸ್ತುತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಕಠಿಣ ನಿರ್ಬಂಧ ಇಷ್ಟೆಲ್ಲ ಸಮಸ್ಯೆಗೆ ಮೂಲ ಕಾರಣವಾಗಿದೆ. ಇಂಧನ ಆಮದು ಮೇಲೆ ಶೆ.60ರಷ್ಟು ಅವಲಂಬಿತವಾಗಿರುವ ಭಾರತ ಈಗ ತೀವ್ರ ಅನಿಲ ಕೊರತೆಯನ್ನು ಅನುಭವಿಸುತ್ತಿರುವುದು ದುರಂತವೇ ಸರಿ.
ಸಮೀಕ್ಷೆಯ ಪ್ರಕಾರ...
ಅಡುಗೆ ಗ್ಯಾಸ್ ಸಿಲಿಂಡರ್ಗಳ ಕೊರತೆಯು ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ಸಮೀಕ್ಷೆಯ ಪ್ರಕಾರ, ಶೇ.20ರಷ್ಟು ದೇಶದ ಜನರು ಅಕ್ರಮವಾಗಿ ಎಲ್ಪಿಜಿ ಮಾರಾಟಗಾರರಿಂದ ಸಿಲಿಂಡರ್‌ಗಳನ್ನು ಖರೀದಿಸಿದ್ದಾಗಿ ತಿಳಿಸಿದ್ದಾರೆ. ಇದು ಒಂದು ವಾರದ ಹಿಂದೆ ಶೇ.14ರಷ್ಟಿತ್ತು. ಈ ಗ್ರಾಹಕರು ಅಧಿಕೃತ ಅಂದರೆ ನಿಗದಿಯಾಗಿರುವ ದರಕ್ಕಿಂತ 300ರಿಂದ 4,000 ರೂ.ವರೆಗೆ ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ, ಪ್ರತಿ ಸಿಲಿಂಡರ್‌ಗೆ 5,000 ರೂ.ಗೂ ಅಧಿಕ ಹಣವನ್ನು ಕೊಟ್ಟಿರುವುದು ಹುಬ್ಬೇರಿಸುವ ಸಂಗತಿ.
ಹಲವೆಡೆ ಹೋಟೆಲ್ಗಳು ಬಂದ್!
ವಾಣಿಜ್ಯ ಸಿಲಿಂಡರ್ಗಳ ಅಭಾವ ಹೋಟೆಲ್ ಉದ್ಯಮಿಗಳಿಗೆ ತಟ್ಟಿದ ಬೆನ್ನಲ್ಲೇ ಬೆಂಗಳೂರು, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ರೆಸ್ಟೋರೆಂಟ್ ಮತ್ತು ಹೋಟೆಲ್ಗಳು ಕ್ಲೋಸ್ ಆಗಿವೆ. ದೊಡ್ಡ ದೊಡ್ಡ ಹೋಟೆಲ್ ಮಾಲೀಕರು ಮಾತ್ರ ತಮ್ಮ ಮಳಿಗೆಯನ್ನು ಗ್ರಾಹಕರಿಗಾಗಿ ತೆರೆದಿದ್ದು, ಇದೇ ಬ್ಲ್ಯಾಕ್ ಮಾರ್ಕೆಟ್ನಲ್ಲಿ ಹೆಚ್ಚಿನ ಹಣ ಕೊಟ್ಟು ಗ್ಯಾಸ್ ಬಳಕೆ ಮಾಡುತ್ತಿರುವುದು ಗಮನಾರ್ಹ,(ಏಜೆನ್ಸೀಸ್).