ಅಕ್ವಾನ್ ಚಂಡಮಾರುತ  
ದೇಶ

ಬಂಗಾಳ ಕೊಲ್ಲಿಯಲ್ಲಿ Akvan ಚಂಡಮಾರುತ ಅಬ್ಬರ; ಒಡಿಶಾ, ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ ಸಂಭವ, ಮೀನುಗಾರಿಕೆ ಸ್ಥಗಿತ

  • ಬಂಗಾಳ ಕೊಲ್ಲಿಯಲ್ಲಿ ಅಕ್ವಾನ್​ ಚಂಡಮಾರುತ ಅಬ್ಬರ

  • ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸೊಂಪೇಟ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ.

  • ಒಡಿಶಾ ಕರಾವಳಿಯಲ್ಲಿ ಅಕ್ವಾನ್ ಚಂಡಮಾರುತದ ಲ್ಯಾಂಡ್‌ಫಾಲ್ ಪ್ರಕ್ರಿಯೆ ಆರಂಭ.

  • ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರಿಕೆ ಸ್ಥಗಿತಗೊಳಿಸಿದ ಮೀನುಗಾರರು.

  • ಒಡಿಶಾದ ಪುರಿ ಬಳಿಯ ಗೋಪಾಲಪುರದಲ್ಲಿ ಇಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ.

ಮುರಸು ಮತ್ತು ಅರ್ನಾಬ್​ ಚಂಡಮಾರುತದಿಂದ ಭಾರಿ ಆಸ್ತಿ-ಪಾಸ್ತಿ ನಾಶಕ್ಕೊಳಗಾಗಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ರಾಜ್ಯಗಳು ಈಗ ಮತ್ತೆ ಅಕ್ವಾನ್​ ಚಂಡಮಾರುತದ ಪ್ರಭಾವಕ್ಕೆ ಒಳಗಾಗಿದೆ. ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ತೀವ್ರ ಚಂಡಮಾರುತ 'ಅಕ್ವಾನ್' ಅಬ್ಬರಿಸುತ್ತಿದ್ದು, ಇಂದು (ನವೆಂಬರ್ 20) ಮಧ್ಯಾಹ್ನದ ವೇಳೆಗೆ ಆಂಧ್ರಪ್ರದೇಶದ ನರಸಾಪುರ ಮತ್ತು ಒಡಿಶಾದ ಪುರಿ ನಡುವಿನ ಕರಾವಳಿಗೆ ಅಪ್ಪಳಿಸಲಿದೆ.

ಒಡಿಶಾದಲ್ಲಿ ಚಂಡಮಾರುತ ಅಬ್ಬರ

ಅಕ್ವಾನ್ ಚಂಡಮಾರುತದ ಪ್ರಭಾವದಿಂದ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಸಾಧಾರಣ ಮಳೆಯಾಗುವುದು ಮುಂದುವರಿದಿದೆ. ಆಕಾಶವನ್ನು ಕಪ್ಪು ಮೋಡಗಳು ಆವರಿಸಿದ್ದು, ಮಳೆಯ ಜೊತೆಗೆ ಬಲವಾದ ಗಾಳಿಯು ಸುಂದರಬನ್ಸ್‌ನ ಕರಾವಳಿ ಪ್ರದೇಶಗಳನ್ನು ಬಡಿದಿದೆ. ನದಿಗಳು ಮತ್ತು ಸಮುದ್ರದಲ್ಲಿ ನೀರಿನ ಮಟ್ಟವೂ ಏರಿಕೆಯಾಗಿದ್ದು, ಕರಾವಳಿಯುದ್ದಕ್ಕೂ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.

ಸಮುದ್ರಕ್ಕೆ ಇಳಿಯದಂತೆ ಆಡಳಿತ ಮಂಡಳಿಯು ಮೀನುಗಾರರಿಗೆ ಸಲಹೆ ನೀಡಿದೆ. ಪ್ರವಾಸಿಗರು ಸಹ ಯಾವುದೇ ಕಾರಣಕ್ಕೂ ನೀರಿಗೆ ಇಳಿಯದಂತೆ ತಡೆಯಲು ಬಕ್ಕಳ ಮತ್ತು ಗಂಗಾಸಾಗರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.

ಆಂಧ್ರದಲ್ಲೂ ಅಬ್ಬರ

ಇನ್ನೊಂದೆಡೆ, ತೀವ್ರ ಚಂಡಮಾರುತ 'ಅಕ್ವಾನ್' ಕರಾವಳಿಯತ್ತ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸೊಂಪೇಟ ಪ್ರದೇಶದ ಕರಾವಳಿಯಲ್ಲಿ ಬೃಹತ್ ಅಲೆಗಳು ಅಪ್ಪಳಿಸುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಮೀನುಗಾರರು ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ.

ಶ್ರೀಕಾಕುಳಂ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಚಂಡಮಾರುತವು ಇಂದು ಒಡಿಶಾದ ಪುರಿ ಸಮೀಪದ ಗೋಪಾಲಪುರದಲ್ಲಿ ಕರಾವಳಿಯನ್ನು ದಾಟುವ (ಲ್ಯಾಂಡ್‌ಫಾಲ್ ಮಾಡುವ) ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಚಂಡ ಮಾರುತದ ಭೀತಿ ಹಿನ್ನೆಲೆ ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ 65ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ನಾಳೆ 24ಕ್ಕೂ ಹೆಚ್ಚು ಎಕ್ಸ್​​ಪ್ರೆಸ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.

ವಿಶಾಖಪಟ್ಟಣಕ್ಕೆ ತಪ್ಪಿದ ಗಂಡಾಂತರ

ವಿಶಾಖಪಟ್ಟಣಕ್ಕೆ ಇದ್ದ ಅಕ್ವಾನ್ ಚಂಡಮಾರುತದ ಅಪಾಯವು ತಪ್ಪಿದೆ. ಆದರೆ, ಕರಾವಳಿಯುದ್ದಕ್ಕೂ ಸಮುದ್ರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರಿದಿದ್ದು, ಗಂಟೆಗೆ 20–30 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಇಂದು ಉತ್ತರ ಆಂಧ್ರದಾದ್ಯಂತ ಮಳೆಯಾಗುವ ಸಾಧ್ಯತೆಯಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ಕರಾವಳಿಯಲ್ಲಿ ಗಂಟೆಗೆ 20 ರಿಂದ 30 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಮುದ್ರದ ಸ್ಥಿತಿ ಪ್ರಕ್ಷುಬ್ಧವಾಗಿದೆ. ವಿಶಾಖಪಟ್ಟಣಕ್ಕೆ ಚಂಡಮಾರುತದ ಭೀತಿ ತಪ್ಪಿದ್ದರೂ, ಇಂದು ಉತ್ತರ ಆಂಧ್ರದಾದ್ಯಂತ ಮಳೆಯಾಗುವ ಸಂಭವವಿದೆ, (ಏಜೆನ್ಸೀಸ್).