CSK vs PBKS: ಕಳೆದ ವಾರ ಆರಂಭಗೊಂಡಿರುವ 19ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡನೇ ಸೋಲು ಅನುಭವಿಸಿದೆ. ಶುಕ್ರವಾರ (ಏಪ್ರಿಲ್ 3) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ 5 ವಿಕೆಟ್‌ಗಳ ಆಘಾತಕಾರಿ ಮುಖಭಂಗ ಅನುಭವಿಸಿದೆ. 209 ರನ್‌ಗಳ ಬೃಹತ್ ಮೊತ್ತ ಗಳಿಸಿದರು ಕೂಡ ಅದನ್ನು ರಕ್ಷಿಸಿಕೊಳ್ಳುವಲ್ಲಿ ಬೌಲರ್‌ಗಳು ವಿಫಲರಾಗಿದ್ದು, ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 210 ರನ್ ಗುರಿ ನೀಡಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಮತ್ತೊಮ್ಮೆ ವಿಫಲವಾಗಿದ್ದು, ಇನ್ನಿಂಗ್ಸ್ ಜವಾಬ್ದಾರಿ ಹೊತ್ತಿದ್ದ ನಾಯಕ ರುತುರಾಜ್ ಗಾಯಕ್ವಾಡ್ 22 ಎಸೆತಗಳಲ್ಲಿ ಕೇವಲ 28 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಆಯುಷ್ ಅಬ್ಬರ
ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಯುವ ಆಟಗಾರ ಆಯುಷ್ ಮಾತ್ರೆ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಒಂದು ಕಡೆ ವಿಕೆಟ್‌ಗಳು ಬೀಳುತ್ತಿದ್ದರೂ ದೃತಿಗೆಡದ ಮಾತ್ರೆ ಪಂಜಾಬ್ ಬೌಲರ್‌ಗಳನ್ನು ಮನಸ್ಸಿಗೆ ಬಂದಂತೆ ದಂಡಿಸಿದರು. ಅವರಿಗೆ ದುಬೆ (45 ರನ್) ಉತ್ತಮ ಸಾಥ್ ನೀಡುವ ಮೂಲಕ ದೊಡ್ಡ ಮೊತ್ತ ಗಳಿಸಲು ನೆರವಾದರು.
ಸಿಎಸ್‌ಕೆ ನೀಡಿದ್ದ 210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಯಾವುದೇ ಒತ್ತಡವಿಲ್ಲದೆ ಕೇವಲ 18.4 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ ಚೆನ್ನೈ ಅಭಿಮಾನಿಗಳನ್ನು ಮೌನವಾಗಿಸಿತು. ಪಂಜಾಬ್ ಪರ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಸ್ಪೋಟಕ ಬ್ಯಾಟಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.
ಪಂದ್ಯದ ಬಳಿಕ ಮಾತನಾಡಿದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ತಮ್ಮ ತಂಡದ ಬೌಲರ್‌ಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದ್ದ ಮತ್ತು ಚೆಂಡು ಬ್ಯಾಟ್‌ಗೆ ಸರಿಯಾಗಿ ಬರದಿದ್ದ ಈ ಪಿಚ್‌ನಲ್ಲಿ 210 ರನ್‌ಗಳು ಗೆಲುವಿಗೆ ಸಾಕಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದೆ ಎಂದು ವಿಶ್ಲೇಷಿಸಿದರೆ, ಅದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ ರುತುರಾಜ್, ಪಿಚ್‌ನಲ್ಲಿ ನಿಧಾನಗತಿಯ ಚೆಂಡುಗಳು ಹಿಡಿತ ಹೊಂದಿದ್ದವು ಮತ್ತು ಬೌಂಡರಿಗಳು ದೊಡ್ಡದಾಗಿದ್ದ ಕಾರಣ ಇದು ರಕ್ಷಿಸಿಕೊಳ್ಳಬಹುದಾದ ಸ್ಕೋರ್ ಆಗಿತ್ತು ಎಂದರು.
ಬೌಲರ್‌ಗಳು ಸರಿಯಾದ ಸಮಯದಲ್ಲಿ ಪ್ರದರ್ಶನ ನೀಡಲಿಲ್ಲ ಮತ್ತು ಒತ್ತಡ ಹೇರುವಲ್ಲಿ ವಿಫಲರಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಓವರ್‌ಗಳು ಚೆನ್ನಾಗಿ ಸಾಗುತ್ತಿದ್ದಾಗ ಕೆಲ ಲೂಸ್ ಬೌಲ್ ಮಾಡಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದು ಪಂಜಾಬ್ ತಂಡಕ್ಕೆ ವರವಾಯಿತು ಎನ್ನುವುದು ಸಿಎಸ್‌ಕೆ ನಾಯಕನ ವಿಶ್ಲೇಷಣೆ. ತಮ್ಮ ನಿಧಾನಗತಿಯ ಬ್ಯಾಟಿಂಗ್ ಸಮರ್ಥಿಸಿಕೊಂಡ ರುತುರಾಜ್, ತಂಡದ ಅಗತ್ಯಕ್ಕೆ ತಕ್ಕಂತೆ ಆಡುವುದು ಮುಖ್ಯವಾಗಿತ್ತು ಮತ್ತು ಸೆಟ್ ಬ್ಯಾಟ್ಸ್‌ಮನ್ ಆಯುಷ್ಗೆ ಸಾಥ್ ನೀಡಲು ತಾವು ಕ್ರೀಸ್‌ನಲ್ಲಿ ಉಳಿಯಲು ಬಯಸಿದ್ದಾಗಿ ತಿಳಿಸಿದರು. ಆದರೆ ತಪ್ಪು ಸಮಯದಲ್ಲಿ ಔಟ್ ಆಗಿದ್ದು ಹಿನ್ನಡೆಯಾಯಿತು ಎಂದು ಒಪ್ಪಿಕೊಂಡರು(ಏಜೆನ್ಸೀಸ್).