Ketan Agarwal Murder | ಕೇತನ್ ಹತ್ಯೆಯ ಭೀಕರ ದೃಶ್ಯ ಬಿಚ್ಚಿಟ್ಟ ರಕ್ಷಣಾ ತಂಡದ ಸದಸ್ಯರು 
ದೇಶ

ತಲೆ ಜಜ್ಜಿ ಕೊಲೆ ಮಾಡಲಾಗಿತ್ತು, ಆದ್ರೆ ಅವಳು...ಕೇತನ್ ಹತ್ಯೆಯ ಭೀಕರ ದೃಶ್ಯ ಬಿಚ್ಚಿಟ್ಟ ರಕ್ಷಣಾ ತಂಡದ ಸದಸ್ಯರು | Ketan Agarwal Murder

ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ (Ketan Agarwal Murder) ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಘಟನೆ ನಡೆದ ಲೋಹಗಢ ಕೋಟೆಯಲ್ಲಿ ಕೇತನ್ ಶವ ಪತ್ತೆಯಾದ ಭೀಕರ ದೃಶ್ಯ ಮತ್ತು ಆರೋಪಿಗಳ ಕ್ರೌರ್ಯದ ಮೈ ಜುಮ್​ ಎನಿಸುವ ಮಾಹಿತಿಗಳು ಹೊರಬಂದಿವೆ. ಕೋಟೆಯ ಆಳದಲ್ಲಿ ಸಿಲುಕಿದ್ದ ಕೇತನ್ ಶವವನ್ನು ಹೊರತೆಗೆದ ರಕ್ಷಣಾ ತಂಡದ ಸದಸ್ಯರು, ಆತನ ತಲೆಯನ್ನು ಸಂಪೂರ್ಣವಾಗಿ ಜಜ್ಜಿ ಕೊಲೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡ ತಂಡದ ಸದಸ್ಯ ಸುನಿಲ್ ಗಾಯಕ್ವಾಡ್, ಬೆಳಗ್ಗೆ 10:30 ರ ಸುಮಾರಿಗೆ ನಮಗೆ ಪೊಲೀಸರಿಂದ ಕರೆ ಬಂತು. ಮಧ್ಯಾಹ್ನ 12:30 ರವರೆಗೆ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತಲಾಯಿತು. ಮಧ್ಯಾಹ್ನ 1:30 ಕ್ಕೆ ಶವವನ್ನು ಅಂಬುಲೆನ್ಸ್‌ಗೆ ಹಸ್ತಾಂತರಿಸಲಾಯಿತು ಎಂದು ಎಎನ್​ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಶವ ಸಿಕ್ಕಾಗಲೂ ಕಣ್ಣೀರು ಹಾಕದ ಕಲ್ಲೆದೆಯ ಪ್ರೇಯಸಿ!

ಕಾರ್ಯಾಚರಣೆಯ ವೇಳೆ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೇತನ್ ಶವವನ್ನು ಕಂದಕದಿಂದ ಮೇಲಕ್ಕೆ ಎತ್ತುವಾಗ ಆತನ ಭಾವಿ ಪತ್ನಿ, ಆರೋಪಿ ಸಿಯಾ ಗೋಯಲ್ ಕೂಡ ಸ್ಥಳದಲ್ಲೇ ಇದ್ದಳು. ಅಲ್ಲಿ ನೆರೆದಿದ್ದವರೆಲ್ಲಾ ಶವದ ಭೀಕರತೆ ನೋಡಿ ಬೆಚ್ಚಿಬಿದ್ದಿದ್ದರೆ, ಸಿಯಾ ಮಾತ್ರ ಯಾವುದೇ ಭಾವನೆಗಳಿಲ್ಲದೆ ಅತ್ಯಂತ ಶಾಂತವಾಗಿ, ಕಲ್ಲೆದೆಯವಳಂತೆ ನಿಂತಿದ್ದಳು ಎಂದು ರಕ್ಷಣಾ ತಂಡದ ಸುನಿಲ್ ಗಾಯಕ್ವಾಡ್ ಹೇಳಿದ್ದಾರೆ.
ಲೋಹಗಢ ಕೋಟೆಯನ್ನು ತಲುಪಿದಾಗ, ತಲೆ ಬುರುಡೆ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದ ಮತ್ತು ಕೈಕಾಲುಗಳ ಮೇಲೆ ತೀವ್ರವಾದ ಗಾಯದ ಗುರುತುಗಳಿದ್ದ ಯುವಕನ ಶವ ನಮಗೆ ಸಿಕ್ಕಿತು. ಕಡಿದಾದ ಇಳಿಜಾರು ಮತ್ತು ದಟ್ಟ ಅರಣ್ಯದ ನಡುವೆ ಶವವನ್ನು ಹೊತ್ತು ತರಲು ನಮಗೆ ಭಾರಿ ಕಷ್ಟವಾಯಿತು ಎಂದು ಅವರು ವಿವರಿಸಿದ್ದಾರೆ.

ಪ್ರಿಯಕರ ಚೇತನ್‌ನಿಂದಲೇ ಕೊಲೆಯ ಸ್ಕೆಚ್

ಸದ್ಯ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದುವರೆಗೆ ನಡೆದಿರುವ ತನಿಖೆಯ ಪ್ರಕಾರ, ಕೇತನ್‌ನನ್ನು ಕೊಲೆ ಮಾಡಲು ಸಿಯಾಗೆ ಆಕೆಯ ಪ್ರಿಯಕರ ಚೇತನ್ ಪ್ರಚೋದನೆ ನೀಡಿದ್ದ ಎನ್ನಲಾಗಿದೆ. ಇದಕ್ಕೂ ಮುನ್ನ ಕೇತನ್‌ನನ್ನು ಮುಗಿಸಲು ಇಬ್ಬರೂ ಹಲವು ಬಾರಿ ವಿಫಲ ಯತ್ನ ನಡೆಸಿದ್ದರು. ಕೊನೆಗೆ ಚೇತನ್ ತಾನೇ ಸ್ವತಃ ಮುಂದೆ ನಿಂತು ಈ ಹತ್ಯೆ ಮಾಡುವುದಾಗಿ ಸಿಯಾಗೆ ಹೇಳಿದ್ದ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಿಯಾ ಸಹೋದರ ಸಾಹಿಲ್‌ನನ್ನು ಪೊಲೀಸರು ಈಗಾಗಲೇ 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದಾರೆ.
ಇನ್ನೊಂದೆಡೆ, ಈ ಹೈಪ್ರೊಫೈಲ್ ಕೊಲೆ ಪ್ರಕರಣದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ನಲ್ಲಿ ನಡೆಸಲಾಗುವುದು ಮತ್ತು ಸರ್ಕಾರದ ಪರವಾಗಿ ಹಿರಿಯ ವಕೀಲ ಉಜ್ವಲ್ ನಿಕಮ್ ಅವರನ್ನು ಸ್ಪೆಷಲ್​ ಪಬ್ಲಿಕ್ ಪ್ರಾಸಿಕೂಟರ್​ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದು ಅತ್ಯಂತ ಆಘಾತಕಾರಿ ಮತ್ತು ನಂಬಲಸಾಧ್ಯವಾದ ಘಟನೆಯಾಗಿದೆ. ಉತ್ತಮ ಕುಟುಂಬದ, ವಿದ್ಯಾವಂತ ಯುವಕ-ಯುವತಿಯರಲ್ಲಿ ಇಂತಹ ಅಪರಾಧದ ಬುದ್ಧಿ ಮತ್ತು ಸೇಡಿನ ಭಾವನೆ ಏಕೆ ಬೆಳೆಯುತ್ತಿದೆ ಎಂಬುದರ ಕುರಿತು ಸಮಾಜವು ಯೋಚಿಸಬೇಕಾಗಿದೆ. ಇದು ಕೇವಲ ಕ್ರಿಮಿನಲ್ ಪ್ರಕರಣವಲ್ಲ, ಇದಕ್ಕೆ ಸಾಮಾಜಿಕ ಆಯಾಮವೂ ಇದೆ ಎಂದು ಸಿಎಂ ಫಡ್ನವೀಸ್ ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​​).