ಮಧ್ಯಪ್ರದೇಶ ದೋಣಿ ದುರಂತ, ಮೃತ ತಾಯಿ-ಮಗನ ದೃಶ್ಯ
- ಮಧ್ಯಪ್ರದೇಶದ ನರ್ಮದಾ ನದಿಯಲ್ಲಿ ಸಂಭವಿಸಿದ ದೋಣಿ ದುರಂತ
- ದೋಣಿ ದುರಂತದಲ್ಲಿ ಇಲ್ಲಿಯವರೆಗೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
- ತಾಯಿ-ಮಗನ ಮೃತದೇಹ ದೃಶ್ಯ ಕಂಡರೆ ಎಂಥವರ ಮನಕಲಕುತ್ತೆ
ಮಧ್ಯಪ್ರದೇಶ: ಭರ್ಗಿ ಡ್ಯಾಮ್ನ ನರ್ಮದಾ ನದಿಯಲ್ಲಿ ದೋಣಿ ಮಗುಚಿದ ಪರಿಣಾಮ ಅದರಲ್ಲಿದ್ದ ಹಲವರ ಪೈಕಿ 9 ಮಂದಿ ದಾರುಣವಾಗಿ ಸಾವನ್ನಪ್ಪಿದ ದುರಂತ ಘಟನೆ (Cruise Boat Tragedy) ಸದ್ಯ ಮೃತರ ಕುಟುಂಬಸ್ಥರನ್ನು ದುಃಖದ ಕೂಪಕ್ಕೆ ದೂಡಿದೆ. ಈ ಮಧ್ಯೆ, ನದಿಯಲ್ಲಿ ತಾಯಿ-ಮಗನ ಮೃತದೇಹ ಪತ್ತೆಯಾಗಿದ್ದು, ಆ ದೃಶ್ಯ ಎಂಥವರ ಕರುಳು ಹಿಂಡುವಂತಿದೆ.
ಗುರುವಾರ (ಏ.30) ಸಂಭವಿಸಿದ ದೋಣಿ ದುರಂತದಲ್ಲಿ ತಾಯಿ ಮತ್ತು ಅವರ 4 ವರ್ಷದ ಮಗ ಸಾವಿಗೀಡಾಗಿದ್ದಾರೆ. ಇಂದು ಬೆಳಗ್ಗೆ ತಾಯಿ-ಮಗನ ಶವಗಳನ್ನು ರಕ್ಷಣಾ ತಂಡ ಪತ್ತೆಹಚ್ಚಿ, ದಡಕ್ಕೆ ತೆಗೆದುಕೊಂಡು ಬಂದಿತು. ತಾನೂ ಬದುಕದಿದ್ದರೂ ಪರವಾಗಿಲ್ಲ, ಮಗುವನ್ನು ಹೇಗಾದರೂ ಬಚಾವ್ ಮಾಡಬೇಕೆಂದು ಎದೆಗೆ ಬಿಗಿದಪ್ಪಿಯೇ ಉಸಿರು ಚೆಲ್ಲಿದ ತಾಯಿಯ ದೃಶ್ಯ ನಿಜಕ್ಕೂ ಮನಕಲಕುತ್ತದೆ.
ಮೃತ ತಾಯಿ-ಮಗ ದೆಹಲಿಯಿಂದ ಮಧ್ಯಪ್ರದೇಶಕ್ಕೆ ಬಂದ ನಾಲ್ಕು ಪ್ರವಾಸಿಗರ ಕುಟುಂಬದ ಭಾಗವಾಗಿದ್ದರು ಎನ್ನಲಾಗಿದೆ. ಇಲ್ಲಿಯವರೆಗೆ 9 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಂದೆ ಮತ್ತು ಮಗಳು ಪವಾಡದಂತೆ ಪಾರಾದರೆ, ತಾಯಿ-ಮಗ ಬಿಗಿದಪ್ಪಿಕೊಂಡೇ ಕೊನೆಯುಸಿರೆಳೆದಿದ್ದಾರೆ. ಘಟನೆಯನ್ನು ತೀರ ಹತ್ತಿರದಿಂದಲೇ ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ಅಷ್ಟಕ್ಕೂ ದುರಂತ ಹೇಗಾಯಿತು ಎಂಬುದನ್ನು ವಿವರಿಸಿದ್ದಾರೆ.
ಹವಾಮಾನ ಹಠಾತ್ತನೆ ಬದಲಾಯಿತು. ಬಲವಾದ ಗಾಳಿ ಬೀಸಿದ ಕೂಡಲೇ ದೋಣಿಯ ತಳದಲ್ಲಿ ಬಿರುಕು ಮೂಡಿ, ನೀರು ಒಳಗೆ ಬರಲು ಪ್ರಾರಂಭಿಸಿತು. ಎಲ್ಲರೂ ಪ್ರಾಣಕ್ಕಾಗಿ ಚೀರಾಡುತ್ತಿದ್ದರು. ಯಾರಿಗೂ ಒಂದು ನಿಮಿಷ ಅಲ್ಲಿ ಏನು ನಡೆಯುತ್ತಿದೆ ಅಂತ ಅರ್ಥವಾಗಲಿಲ್ಲ. ಮುಳುಗುತ್ತಿದ್ದ ದೋಣಿ ಮಧ್ಯೆ ಅನೇಕರು ಸಹಾಯಕ್ಕಾಗಿ ಗೋಳಾಡುತ್ತಿದ್ದರು. ಇತ್ತ ನಾನು ಕೂಡ ಮುಳುಗುತ್ತಿದ್ದೆ. ನನ್ನ ಪ್ರಾಣ ಹೋಯಿತು ಎಂದೇ ಭಾವಿಸಿದೆ ಎಂದರು.
"ಬದುಕುಳಿಯಲು ಹೋರಾಡುತ್ತಿದ್ದಾಗ, ನನ್ನ ಅರ್ಧದೇಹ ನೀರಿನ ಕೆಳಗಿತ್ತು. ತಲೆ ಮಾತ್ರ ಮೇಲಿತ್ತು. ಹೀಗಾಗಿ, ಉಸಿರಾಡಲು ಸಾಧ್ಯವಾಯಿತು. ಸುಮಾರು ಎರಡು ಗಂಟೆಗಳ ಕಾಲ ನಾನು ನೀರಿನಲ್ಲಿಯೇ ಸಿಲುಕಿದ್ದೆ. ಕಣ್ಣೆದುರೇ ಮೃತರ ಶವಗಳು ತೇಲಾಡುತ್ತಿತ್ತು. ಅದೃಷ್ಟವಶಾತ್, ರಕ್ಷಣಾ ತಂಡಗಳು ನನ್ನನ್ನು ಗುರುತಿಸಿ, ನನ್ನನ್ನು ಸಾವಿನ ದವಡೆಯಿಂದ ಪಾರು ಮಾಡಿತು ಎಂದು ಹೇಳಿದ್ದಾಗಿ ಎನ್ಡಿಟಿವಿ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಗಳ ಪ್ರಕಾರ, ಇಲ್ಲಿಯವರೆಗೆ 24 ಜನರನ್ನು ರಕ್ಷಿಸಲಾಗಿದ್ದು, 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 24ರ ಪೈಕಿ 17 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಣೆಯಾದವರಿಗಾಗಿ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದೆ,(ಏಜೆನ್ಸೀಸ್).